ಡಿ.ಭೂಮಿಕಾ

ತುಮಕೂರು | ಅಥ್ಲೀಟ್

ಓಡುವ ಚಿನ್ನದ ಹುಡುಗಿ

 

 

ಚಿಕ್ಕಬಳ್ಳಾಪುರ ತಾಲ್ಲೂಕಿನ ಬಂಡಹಳ್ಳಿಯ ಕೃಷಿಕ ಕುಟುಂಬದಲ್ಲಿ ಹುಟ್ಟಿದ ಡಿ.ಭೂಮಿಕಾ ಅವರಿಗೆ ಚಿಕ್ಕಂದಿನಲ್ಲಿಯೇ ಓದಿಗಿಂತಲೂ ಓಟದ ಮೇಲೆಯೇ ಹೆಚ್ಚಿನ ಒಲುವು. ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರ ಮಾರ್ಗದರ್ಶನ ಮತ್ತು ಹಿರಿಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್‌ ಅವರ ಪ್ರೇರಣೆಯಿಂದ 7ನೇ ತರಗತಿಯಿಂದಲೇ ಓಟದಲ್ಲಿ ಗಂಭೀರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಭೂಮಿಕಾ, ಕಳೆದ ಆರೇಳು ವರ್ಷಗಳಲ್ಲಿ 12 ಚಿನ್ನದ ಪದಕಗಳನ್ನು ಬಾಚಿಕೊಳ್ಳುವ ಮೂಲಕ ‘ಚಿನ್ನದ ಹುಡುಗಿ’ಯಾಗಿ 400 ಮೀಟರ್ ಓಟದ ಸ್ಪರ್ಧೆಗಳಲ್ಲಿ ತಮ್ಮ ಗೆಲುವಿನ ನಾಗಾಲೋಟ ಮುಂದುವರಿಸಿದ್ದಾರೆ.

 

ಭೂಮಿಕಾ ಅವರು ಈವರೆಗೆ ಒಂಬತ್ತು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವೈಯಕ್ತಿಕ ವಿಭಾಗದಲ್ಲಿ ಐದು ಬಾರಿ ಚಿನ್ನದ ಪದಕಗಳನ್ನು ಪಡೆದಿದ್ದಾರೆ. ರಿಲೆಯಲ್ಲಿ ಎರಡು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಅಷ್ಟೇ ಅಲ್ಲದೆ ಎಂಟು ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ, ಐದು ಚಿನ್ನದ ಪದಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

 

ಪ್ರಸ್ತುತ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪದವಿ ಎರಡನೇ ವರ್ಷದಲ್ಲಿ ಓದುತ್ತಿರುವ ಭೂಮಿಕಾ ಅವರು ‘ಏನಾದರೂ ಸಾಧನೆ ಮಾಡಿ ಸಮಾಜದಲ್ಲಿ ನನ್ನದು ಎನ್ನುವ ಒಂದು ಹೆಸರು ಗಳಿಸಬೇಕು’ ಎನ್ನುವ ಕನಸು ಕಾಪಿಟ್ಟುಕೊಂಡು ಅದನ್ನು ನನಸು ಮಾಡುವ ನಿಟ್ಟಿನಲ್ಲಿ ಓಟಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿ, ನಿತ್ಯವೂ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

 

-ಈರಪ್ಪ ಹಳಕಟ್ಟಿ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು