ಚಿನ್ಮಯ್ ಅತ್ರೇಯಸ್

ಬೆಂಗಳೂರು | ಹಿನ್ನೆಲೆ ಗಾಯಕ

ಚಿನ್ಮಯ ಗಾಯನದಲ್ಲಿ ತನ್ಮಯ

 

 

ಒಂದೊಳ್ಳೆ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರೆ ಎಷ್ಟು ದೊಡ್ಡ ಹೆಸರು ಮಾಡಬಹುದು ಎಂಬುದಕ್ಕೆ ಸಾಕ್ಷಿ ಚಿನ್ಮಯ್ ಅತ್ರೇಯಸ್. 2007ರಲ್ಲಿ ಝೀ ಕನ್ನಡ ವಾಹಿನಿಯ ಸರೆಗಮಪ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದವರು. ಆ ಗೆಲುವಿಗಷ್ಟೇ ತೃಪ್ತರಾಗದ ಅವರು ಸಂಗೀತಾಭ್ಯಾಸವನ್ನು ತಪಸ್ಸಿನಂತೆ ಕೈಗೊಂಡು, ಈಗ ಕನ್ನಡದ ಬೇಡಿಕೆಯ ಹಿನ್ನೆಲೆ ಗಾಯಕ ಎನಿಸಿದ್ದಾರೆ.

 

ಡಾ.ಸಿ.ಆರ್. ಅಮರನಾಥ್ ಹಾಗೂ ಶೀಲಾ ದಂಪತಿಯ ಪುತ್ರ ಚಿನ್ಮಯ್. ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಬಿಎನ್ ಎಂಐಟಿಯಲ್ಲಿ ಬಿಇ ಪದವಿ ಪಡೆದಿರುವ ಅವರು, ಸಂಗೀತದ ಜೊತೆಗೆ ಓದಿಗೂ ಸಮಾನ ಪ್ರಾಶಸ್ತ್ಯ ನೀಡಿದ್ದಾರೆ. ಸರೆಗಮಪ ಸ್ಪರ್ಧೆಯಲ್ಲಿ ವಿಜೇತರಾದ ನಂತರ, ಅವಕಾಶಗಳು ಅರಸಿ ಬಂದರೂ, ಅವರು ಚಲನಚಿತ್ರ ರಂಗದಲ್ಲಿ ಹಿನ್ನೆಲೆ ಗಾಯಕರಾಗಿ ಪಾದಾರ್ಪಣೆ ಮಾಡಿದ್ದು ತೆಲುಗಿನ ‘ಅಂದಮೈನ ಮನಸುಲೊ’ ಸಿನಿಮಾ ಮೂಲಕ. ಕೆ. ಕಲ್ಯಾಣ ಸಂಗೀತ ನಿರ್ದೇಶನದ ‘ಚಿಕ್ಕಮಗಳೂರ ಚಿಕ್ಕಮಲ್ಲಿಗೆ’ ಸಿನಿಮಾದಲ್ಲಿ ಹಾಡುವ ಮೂಲಕ ಕನ್ನಡ ಚಿತ್ರದಲ್ಲಿ ಹಿನ್ನೆಲೆ ಗಾಯಕರಾದರು.

 

ದೇವಿಶ್ರೀ ಪ್ರಸಾದ್‌ ಸಂಗೀತ ನಿರ್ದೇಶನದ ಸಂಗಮ, ಮನೋಹರ್‌ ಅವರ ನಂದ, ಮಣಿಕಾಂತ್‌ ಸಂಗೀತ ನಿರ್ದೇಶನ ಮಳೆಬಿಲ್ಲೆ ಸೇರಿದಂತೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಚಿನ್ಮಯ್‌ ಹಾಡಿದ್ದಾರೆ. ವಿಜಯ್‌ ರಾಘವೇಂದ್ರ ನಟನೆಯ ಧರ್ಮಸ್ಯ ಚಿತ್ರ ಅವರು ಇತ್ತೀಚೆಗೆ ಧ್ವನಿ ನೀಡಿರುವ ಸಿನಿಮಾ.

 

ಅಮೆರಿಕ, ಆಸ್ಟ್ರೇಲಿಯಾ, ಸಿಂಗಾಪುರ, ಥೈಲ್ಯಾಂಡ್, ಕೀನ್ಯಾ, ಉಗಾಂಡ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕಾರ್ಯಕ್ರಮ ನೀಡಿರುವ ಚಿನ್ಮಯ್, ಕನ್ನಡದ ಕಹಳೆ ಮೊಳಗಿಸುತ್ತಿದ್ದಾರೆ. 300ಕ್ಕೂ ಹೆಚ್ಚು ವೇದಿಕೆ ಕಾರ್ಯಕ್ರಮಗಳನ್ನು ನೀಡಿರುವುದು ಅವರ ಜನಪ್ರಿಯತೆಗೆ ಸಾಕ್ಷಿ.

 

ಆಲ್‌ ಇಂಡಿಯಾ ರೇಡಿಯೊದ ಭಾವಗೀತೆ ವಿಭಾಗದಲ್ಲಿ ಶಾಶ್ವತ ಕಲಾವಿದರೂ ಆಗಿರುವುದು ಅವರ ಪ್ರತಿಭೆಗೆ ಸಂದಿರುವ ಗೌರವ. ವಿದ್ಯೆಯ ಜೊತೆಗೆ ವಿನಯಕ್ಕೂ ಒಡೆಯರಂತಿರುವ ಚಿನ್ಮಯ್, ಸಂಗೀತದಲ್ಲಿ ಸಾಧನೆ ಮಾಡಬಯಸುವವರಿಗೆ ಸ್ಫೂರ್ತಿಯೂ ಹೌದು .

 

– ಗುರು ಪಿ.ಎಸ್.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು