ಚಿದಾನಂದ ಮೂರ್ತಿ

ದೊಡ್ಡಬಳ್ಳಾಪುರ | ಪರಿಸರ ಜಾಗೃತಿ

ಕೃಷಿಯಲ್ಲೇ ಚಿದಾನಂದ

 

 

ಕೃಷಿ, ಸಮಾಜಸೇವೆ, ಸಂಘಟನೆ, ಪರಿಸರ ಜಾಗೃತಿಯಲ್ಲಿ ಸಕ್ರಿಯರಾಗಿದ್ದಾರೆ ದೊಡ್ಡಬಳ್ಳಾಪುರದ ಚಿದಾನಂದ ಮೂರ್ತಿ ಆರಾಧ್ಯ. ಬದುಕಿಗೆ ತಕ್ಕಷ್ಟು ಓದು, ಬಳಿಕ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಿಂದ ಸಾವಯವ ಕೃಷಿ ತರಬೇತಿ ಪಡೆದರು. ಈಗ ಏಟ್ರಿಯ ಸ್ವಯಂಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 

 

ಪ್ರಗತಿಪರ ಸಂಘಟನೆಗಳ ನಂಟು, ಪೂರ್ಣಚಂದ್ರ ತೇಜಸ್ವಿ, ಚೆಗುವೆರಾ ಅವರ ಬರಹಗಳ ಪ್ರೇರಣೆಯಿಂದ ಸಂಘಟನೆಗಳಲ್ಲಿ ತೊಡಗಿದರು. ನಗರದಲ್ಲಿ ಸಸಿ ಬೆಳೆಸಬೇಕು ಎಂದು ಪಣ ತೊಟ್ಟರು. ಇದುವರೆಗೆ ನೆಟ್ಟ 200 ಸಸಿಗಳ ಪೈಕಿ ಶೇ 99ರಷ್ಟು ಬೆಳೆದಿವೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಚಿದಾನಂದ. 

 

ಗೆಳೆಯರ, ಪರಿಚಿತರ ಜನ್ಮದಿನ, ವಿಶೇಷ ಸಂದರ್ಭಗಳಂದು ಸಸಿ ನೆಟ್ಟು ಬೆಳೆಸುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವುದು, ದೊಡ್ಡಬಳ್ಳಾಪುರ ತಾಲ್ಲೂಕಿನ ಗಂಡ್ರಗೊಳ್ಳಿಪುರ ಅರಣ್ಯ ಪ್ರದೇಶ, ಮಾಕಳಿ ಬೆಟ್ಟದ ತಪ್ಪಲಿನಲ್ಲಿ ವಿವಿಧ ಕಾಲೇಜುಗಳ ಎನ್ಎಸ್ಎಸ್ ಹಾಗೂ ಸಂಘ ಸಂಸ್ಥೆಗಳನ್ನು ಸಂಘಟಿಸಿ ಸುಮಾರು 5 ಸಾವಿರ ಸಸಿಗಳನ್ನು ನೆಟ್ಟು ಅವುಗಳ ಬೆಳವಣಿಗೆಗೆ ವೈಯಕ್ತಿಕ ಆಸಕ್ತಿ ವಹಿಸಿದ್ದಾರೆ.

 

ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗುವ ಸಮಯಕ್ಕೆ ಒಂದಿಷ್ಟು ಜನ ಯುವಕರನ್ನು ಸೇರಿಸಿಕೊಂಡು ಸೈಕಲ್ ಜಾಥಾ ನಡೆಸುವ ಮೂಲಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಆತ್ಮಹತ್ಯೆ ಮಾಡಿಕೊಳ್ಳದಂತೆ ಹಾಗೂ ಅನುತ್ತೀರ್ಣ ಆದವರಿಗೆ ಉಚಿತವಾಗಿ ತರಗತಿ ನಡೆಸುವ ಮೂಲಕ ಮತ್ತೆ ಪರೀಕ್ಷೆ ಬರೆದು ಪಾಸಾಗುವಂತೆ ಮಾಡುತ್ತಿದ್ದಾರೆ.

 

- ನಟರಾಜ ನಾಗಸಂದ್ರ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು