ಚಂದ್ರು ನಂದಳ್ಳಿ

ಕುಂದಗೋಳ | ಕಟ್ಟಡ ಪೇಂಟರ್

ಹೆರಿಗೆಗಾಗಿ ಉಚಿತ ವಾಹನ ಸೇವೆ ಕಲ್ಪಿಸಿರುವ ಪರೋಪಕಾರಿ

 

ತನ್ನ ಅಕ್ಕನ ಹೆರಿಗೆ ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ವಾಹನ ಸಿಗದೆ ಪರದಾಡಿದ ವ್ಯಕ್ತಿ, ಈಗ ತಾವೇ ಹೆರಿಗೆಗಾಗಿ ಉಚಿತ ವಾಹನ ಸೇವೆಯನ್ನು ನೀಡುತ್ತಿದ್ದಾರೆ. 

 

ಕುಂದಗೋಳ ತಾಲ್ಲೂಕಿನ ಕಮಡೊಳ್ಳಿ ಗ್ರಾಮದ ಚಂದ್ರು ನಂದಳ್ಳಿ, ವೃತ್ತಿಯಲ್ಲಿ ಕಟ್ಟದ ಪೇಂಟರ್. ತನ್ನ ಆದಾಯದಲ್ಲಿನ ಶೇ. 25ರಷ್ಟನ್ನು ಸಮಾಜಸೇವೆಗಾಗಿ ಮೀಸಲಿಟ್ಟಿದ್ದಾರೆ.

 

‘ಅಕ್ಕನ ಹೆರಿಗೆ ಸಂದರ್ಭದಲ್ಲಿ, ಆಸ್ಪತ್ರೆಗೆ ಕರೆದೊಯ್ಯಲು ಯಾರೂ ಸಹಾಯ ನೀಡಿರಲಿಲ್ಲ.  ಹೆರಿಗೆ ಮನೆಯಲ್ಲೇ ಆಯಿತು. ಅಕಸ್ಮಾತ್ ಏನಾದರೂ ತೊಂದರೆ ಆಗಿದ್ದರೆ ಎಂದು ಆತಂಕಕ್ಕೆ ಒಳಗಾಗಿದ್ದೆ. ಇಂಥ ಅಸಹಾಯಕ ಪರಿಸ್ಥಿತಿ ಯಾರಿಗೂ ಬರಬಾರದೆಂದು ಅಂದೇ ನಿರ್ಧರಿಸಿದ್ದೆ. ನಂತರ ಒಂದು ವಾಹನ ಖರೀದಿಸಿ, ಅಗತ್ಯವಿರುವ ಗರ್ಭಿಣಿಯರಿಗೆ ಉಚಿತ ಸೇವೆ ನೀಡಲಾರಂಭಿಸಿದೆ’ ಎಂದು ತಮ್ಮ ಕತೆ ಹೇಳುತ್ತಾರೆ ಅವರು. 

 

ದಿನದ 24 ತಾಸು ವಾಹನ ಸೇವೆ ಲಭ್ಯ ಇದೆ. ಈವರೆಗೆ 107 ಹೆಣ್ಣುಮಕ್ಕಳು ಈ ಸೇವೆಯ ಲಾಭ ಪಡೆದಿದ್ದಾರೆ.

 

10ನೆ ತರಗತಿವರೆಗೆ ಓದಿರುವ ಚಂದ್ರು, ಶಾಲೆಯ ಮಕ್ಕಳ ಬಿಸಿಯೂಟಕ್ಕೆ 250 ತಟ್ಟೆಗಳನ್ನು, ಅಂಗನವಾಡಿ ಮಕ್ಕಳಿಗೆ ಉಚಿತ ಪಾಟಿಚೀಲಗಳನ್ನು ನೀಡಿದ್ದಾರೆ.

 

 ಇಡೀ ತಾಲ್ಲೂಕಿಗೆ ಈ ಸೇವೆ ವಿಸ್ತರಿಸಲು, ಮತ್ತೊಂದು ವಾಹನ ಖರೀದಿಗಾಗಿ ಪ್ರಯತ್ನಿಸುತ್ತಿದ್ದಾರೆ.

- ಇ.ಎಸ್. ಸುಧೀಂದ್ರ ಪ್ರಸಾದ್

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು