ಚಂದ್ರಶೇಖರ ಹಿರೇಗೋಣಿಗೆರೆ

ಶಿವಮೊಗ್ಗ | ರಂಗಭೂಮಿ

ರಂಗಭೂಮಿಯ ‘ಹೊಂಗಿರಣ’

 

ಖಾಸಗಿ ವಾಹಿನಿಯ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನಲ್ಲಿ ಸದ್ದು ಮಾಡುತ್ತಿರುವ ಚಂದ್ರಶೇಖರ ಹಿರೇಗೋಣಿಗೆರೆ ಶಿವಮೊಗ್ಗ ವೃತ್ತಿ ರಂಗಭೂಮಿಯ ಕಲಾವಿದ. ರಂಗಭೂಮಿ ಚಟವಟಿಕೆಗಳಿಗೇ ಹೆಸರಾದ ‘ಹೊಂಗಿರಣ’ ತಂಡದ ಅಧ್ಯಕ್ಷ. ಶಿವಮೊಗ್ಗ ಅಂಚೆ ಕಚೇರಿ ನೌಕರ.

 

ಹೊನ್ನಾಳಿ ತಾಲ್ಲೂಕು ಹಿರೇಗೋಣಿಗೆರೆಯ ಚಂದ್ರಶೇಖರ್ ರಾಮಪ್ಪ, ಹನುಮಂತಮ್ಮ ದಂಪತಿ ಪುತ್ರ. ಅಪ್ಪ ಸಣ್ಣ ರೈತ. ಮನೆಯಲ್ಲಿ ಬಡತನವಿದ್ದರೂ ರಾಮಪ್ಪ ಕಲೆಯ ಆರಾಧಕ. ಊರ ಹಬ್ಬಗಳಲ್ಲಿ ಆಯೋಜಿಸುತ್ತಿದ್ದ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಸ್ತ್ರೀ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ತಾವು ಅನಕ್ಷರಸ್ಥರಾದರೂ ಮಗ ಚಂದ್ರಶೇಖರನಿಗೆ ಶಿಕ್ಷಣ ಕೊಡಿಸಿದರು. ಕಲೆ ಅಪ್ಪನಿಂದ ಬಳುವಳಿಯಾಗಿ ಬಂದಿತ್ತು. ಗಾಜನೂರಿನ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಓದುವಾಗ ಅಲ್ಲಿನ ಶಿಕ್ಷಕ ಡಾ.ಸಾಸ್ವೆಹಳ್ಳಿ ಸತೀಶ್ ಅವರಲ್ಲಿನ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿದರು. ಕಿರು ನಾಟಕ ಸ್ಪರ್ಧೆಗೆ ಮಾಡಿದ ಶಿಖಂಡಿ ಪಾತ್ರ ಅವರ ರಂಗಭೂಮಿ ಪಯಣದ ಮೊದಲ ಮೆಟ್ಟಿಲು.  ಅವರ ರಂಗಭೂಮಿ ಪಯಣ ನಿರಂತರವಾಗಿ ಸಾಗಿದೆ.

 

ಹೆಬ್ಬೆಟ್ಟು, ಕಲ್ಪವೃಕ್ಷ, ದನಕಾಯೋ ಹುಡುಗರ ದೊಡ್ಡಾಟ, ಒಂದು ಬೊಗಸೆ ನೀರು, ಸಂಕ್ರಾಂತಿ, ಗುಣಮುಖ, ಬಯಲುಸೀಮೆ ಕಟ್ಟೆ ಪುರಾಣ, ವೀರ ಉತ್ತರ ಕುಮಾರ ಮೊದಲಾದ ನಾಟಕಗಳಲ್ಲಿ ಅವರು ಅಭಿನಯಿಸಿದ್ದಾರೆ. ಏಸೂರು ಕೊಟ್ಟರೂ ಈಸೂರು ಕೊಡೆವು, ಪಂಜರ ಶಾಲೆ, ಬಾರಮ್ಮ ಭಗೀರಥಿ, ಕೃಷ್ಣ ಸಂಧಾನ, ಯಹೂದಿ ಹುಡುಗಿ ಸೇರಿ ಹತ್ತಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅವರ ಈ ಸಾಧನೆಗೆ ಹತ್ತಾರು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.

 

- ಚಂದ್ರಹಾಸ ಹಿರೇಮಳಲಿ
 

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು