ಕೊಡಗು | ಶಿಕ್ಷಕ
ಇವರು ವಿದ್ಯಾರ್ಥಿಗಳ ‘ಪ್ರೀತಿಯ ಮೇಷ್ಟ್ರು’. ಪ್ರಯೋಗಶೀಲ, ಕ್ರಿಯಾಶೀಲ, ಚಿಂತನಾಶೀಲ ಶಿಕ್ಷಕರ ಹೆಸರು ಸಿ.ಎಸ್.ಸತೀಶ್.
ಕೊಡಗು ಜಿಲ್ಲೆಯ ಶನಿವಾರಸಂತೆ ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಸತೀಶ್ ಅವರು ತಮ್ಮ ಸ್ವಂತ ಸಂಬಳದಲ್ಲೇ ಶಾಲೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಶಾಲೆಯಲ್ಲಿ 1ರಿಂದ 5ನೇ ತರಗತಿ ಇದ್ದು, 35 ವಿದ್ಯಾರ್ಥಿಗಳಿದ್ದಾರೆ. ಯುವ ಶಿಕ್ಷಕ ಸತೀಶ್ ಅವರು ಜಿಲ್ಲೆಯಲ್ಲೇ ‘ಮಾದರಿ ಶಿಕ್ಷಕ’ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಶಾಲಾ ಪರಿಸರವನ್ನು ಕಲಿಕಾ ಸ್ನೇಹಿಯಾಗಿ ಪರಿವರ್ತಿಸಿದ್ದಾರೆ. ದಿನಕ್ಕೊಂದು ಪ್ರಯೋಗದ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುತ್ತಿದ್ದಾರೆ. ಸ್ವಂತ ಖರ್ಚಿನಲ್ಲಿ ಪ್ರಯೋಗಾಲಯ ನಿರ್ಮಿಸಿದ್ದಾರೆ. ರಜೆಯ ದಿನಗಳಲ್ಲೂ ವ್ಯಕ್ತಿತ್ವ ವಿಕಸನ ಶಿಬಿರ, ನೃತ್ಯ, ಸಂಗೀತ ಕಲಿಕಾ ತರಗತಿಗಳನ್ನು ನಡೆಸುತ್ತಿದ್ದಾರೆ.
ಸಾಂಚಿಕಲೆ, ಚಿತ್ರಕಲೆ, ಯೋಗ... ಇತ್ಯಾದಿ ವಿಭಿನ್ನ ಚಟುವಟಿಕೆಗಳ ಮೂಲಕ ಬೋಧನೆ ನೀಡುತ್ತಿದ್ದಾರೆ. ನೂರಾರು ಆಕರ್ಷಕ ಕಲಿಕೋಪಕರಣಗಳನ್ನು ನಿರ್ಮಾಣ ಮಾಡಿ, ಗುಣಾತ್ಮಕ ಶಿಕ್ಷಣ ನೀಡುತ್ತಿದ್ದಾರೆ. ಶಾಲಾ ಆವರಣದಲ್ಲಿ ಕಿರು ಮೃಗಾಲಯ ನಿರ್ಮಿಸಿದ್ದಾರೆ.
ತ್ಯಾಜ್ಯದಿಂದ ಗೋಬರ್ ಗ್ಯಾಸ್ ಉತ್ಪಾದನೆ, ಬಳಸಿದ ನೀರನ್ನು ಸಾಂಪ್ರದಾಯಿಕ ವಿಧಾನದಲ್ಲಿ ಶುದ್ಧೀಕರಿಸುವ ಘಟಕ, ಕಾಡಿನ ಅಭಿವೃದ್ಧಿಗಾಗಿ ಶಾಲೆಯಲ್ಲಿ ‘ಬೀಜ ಭಂಡಾರ’ ಸ್ಥಾಪಿಸಿ, ಹಣ್ಣಿನ ಗಿಡ ಗಳನ್ನು ಬೆಳೆಸಿದ್ದಾರೆ. ಬಳಸಿದ ಪ್ಲಾಸ್ಟಿಕ್ ಕ್ಯಾನ್‌ಗಳಿಂದ ಯೂರಿನಲ್ಸ್ ಕಮೋಡ್‌ಗಳನ್ನು ಮಾಡಿದ್ದಾರೆ.
- ಶ.ಗ.ನಯನತಾರಾ