ಬಸವರಾಜ ಉಮರಾಣಿ

ಬೆಳಗಾವಿ | ಅಸಾಧಾರಣ ಸ್ಮರಣಶಕ್ತಿ

ನಡೆದಾಡುವ ಕಂಪ್ಯೂಟರ್ ಬಸವರಾಜ

ನಡೆದಾಡುವ ಕಂಪ್ಯೂಟರ್ ಖ್ಯಾತಿಯ ಬಸವರಾಜ ಉಮರಾಣಿ ಬೆಳಗಾವಿ ಜಿಲ್ಲೆ ಅಥಣಿಯವರು. ಹುಟ್ಟಿನಿಂದಲೇ ಅಂಧರಾಗಿರುವ ಇವರು ಅಸಾಧಾರಣ ಸ್ಮರಣಶಕ್ತಿ, ಅಪಾರ ಬುದ್ಧಿಮತ್ತೆ ಹೊಂದಿದ್ದಾರೆ.

 

ಯಾರದ್ದಾದರೂ ಜನ್ಮದಿನಾಂಕ, ಶತಮಾನದ ಹಿಂದಿನ ಯಾವುದಾದರೂ ಒಂದು ದಿನಾಂಕವನ್ನು ಹೇಳಿದರೂ ಅಂದಿನ ವಾರವನ್ನು ನಿಖರವಾಗಿ ಹೇಳುತ್ತಾರೆ. 9 ಸಂಖ್ಯೆಗಳ ಸಂಕಲನ, ವ್ಯವಕಲನ, ಐದಂಕಿಗಳ ಗುಣಾಕಾರ, ಭಾಗಾಕಾರದ ಲೆಕ್ಕಗಳಿಗೆ ಸೆಂಕೆಂಡುಗಳಲ್ಲಿ ಉತ್ತರಿಸುತ್ತಾರೆ. ಮೂರಂಕಿಯ 10 ಸಂಖ್ಯೆಗಳನ್ನು ಒಮ್ಮೆ ಇವರೆದುರು ಹೇಳಿದರೆ ಅವುಗಳನ್ನು ಅನುಕ್ರಮವಾಗಿ, ತಿರುವು– ಮುರುವಾಗಿ ಹೇಳಿ ಅಚ್ಚರಿ ಮೂಡಿಸುತ್ತಾರೆ. ಮೂರಂಕಿಯ ಮಗ್ಗಿ ಇವರಿಗೆ ಕರತಲಾಮಲಕ.

 

‘ಸುಮಾರು 10 ಸಾವಿರ ದೂರವಾಣಿ ಸಂಖ್ಯೆಗಳನ್ನು ನೆನಪಿನಲ್ಲಿಟ್ಟುಕೊಂಡಿದ್ದೇನೆ. 10 ವರ್ಷಗಳ ನಂತರವೂ ಆಯಾ ವ್ಯಕ್ತಿ, ಅವರ ಸಂಪರ್ಕ ಸಂಖ್ಯೆಯನ್ನು ನೆನಪಿಸಿಕೊಂಡು ಫೋನ್ ಮಾಡಿ ಮಾತನಾಡಬಲ್ಲೆ’ ಎಂದು ಬಸವರಾಜ ಆತ್ಮವಿಶ್ವಾಸದಿಂದ ಹೇಳುತ್ತಾರೆ.

 

ರೂಪಾಯಿ ನೋಟುಗಳ ಮೌಲ್ಯವನ್ನು ನಿಖರವಾಗಿ ಗುರುತಿಸುವುದು, ಗಡಿಯಾರವಿಲ್ಲದೆ ನಿಖರ ಸಮಯ ಹೇಳುವುದು, ಎಂದೋ ಕೇಳಿದ ಕ್ರಿಕೆಟ್‌ ವೀಕ್ಷಕ ವಿವರಣೆಯನ್ನು ನಿರರ್ಗಳವಾಗಿ ಹೇಳುವ ಸಾಮರ್ಥ್ಯ ಇವರಿಗೆ ಸಿದ್ಧಿಸಿದೆ.

 

ಬಸವರಾಜ 10, 12ನೇ ತರಗತಿ, ಪದವಿ, ಬಿ.ಇಡಿ, ಸ್ನಾತಕೋತ್ತರ ಪದವಿಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಕೆಎಎಸ್ ಅಥವಾ ಐಎಎಸ್ ಅಧಿಕಾರಿಯಾಗಬೇಕೆನ್ನುವ ತುಡಿತ ಹೊಂದಿದ್ದಾರೆ.

 

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ಪ್ರಧಾನಿ ನರೇಂದ್ರ ಮೋದಿ, ದುಬೈ ದೊರೆ ಶೇಖ ಮಹಮ್ಮದ್ ಅವರನ್ನು ಭೇಟಿಯಾಗಿ ಅವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

 

- ಚನ್ನಬಸಪ್ಪ ರೊಟ್ಟಿ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು