ಬಸವರಾಜ ಕೊಣ್ಣೂರ

ನರಗುಂದ | ಅಂತಾರಾಷ್ಟ್ರೀಯ ಯೋಗ ಪಟು

ಶಲಭಾಸನದಲ್ಲಿ ಗಿನ್ನೆಸ್‌ ದಾಖಲೆ ಮಾಡಿದ ಬಸವರಾಜ 

 

ಮಿಡತೆಯನ್ನು ಹೋಲುವಂತೆ ದೇಹವನ್ನು ತೋರುವ ಶಲಭಾಸನದಲ್ಲಿ ಸುದೀರ್ಘಕಾಲ ಇದ್ದ ದಾಖಲೆ ಇವರ ಹೆಸರಿಗಿದೆ. ಚಂಡೀಗಢದಲ್ಲಿ ಕಳೆದ ವರ್ಷ ನಡೆದ ಯೋಗ ಉತ್ಸವದಲ್ಲಿ 2 ನಿಮಿಷ 27 ಸೆಕೆಂಡ್‌ ಶಲಭಾಸನದಲ್ಲಿದ್ದು ಗಿನ್ನೆಸ್‌ ದಾಖಲೆಯ ಪುಸ್ತಕದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದು, ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಶಿರೋಳ ಗ್ರಾಮದ ಬಸವರಾಜ ಕೊಣ್ಣೂರ.

 

ಕಳೆದೆಂಟು ವರ್ಷಗಳಿಂದ ವಿಯಟ್ನಾಂನಲ್ಲಿ ಯೋಗ ಗುರುವಾಗಿ ಪಾಠ ಕಲಿಸುತ್ತಿದ್ದಾರೆ. ಅವರ ಈ ಸಾಧನೆಗೆ ‘ನನ್ನೂರು ಶಿರೋಳದ ಹಂಪಸಾಗರ ಮರಿದೇವರ ಸ್ಮಾರಕ ಯೋಗ ಹಾಗೂ ವ್ಯಾಯಾಮ ಪಾಠಶಾಲೆಯೇ ಕಾರಣ’ ಎಂದು ಹೇಳುತ್ತಾರೆ.

 

 ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಬಸವರಾಜ 11ನೇ ವಯಸ್ಸಿನಿಂದಲೇ ಯೋಗಾಭ್ಯಾಸ ಮೈಗೂಡಿಸಿಕೊಂಡವರು. ಇದೀಗ ಅಂತರರಾಷ್ಟ್ರೀಯ ಯೋಗಪಟು ಆಗಿದ್ದಾರೆ. 

 

ಸ್ವಗ್ರಾಮದಲ್ಲಿ ರುದ್ರಪ್ಪ ಕೊಣ್ಣೂರು ಎಂಬ ಗುರುಗಳ ಬಳಿ ತರಬೇತಿ ಪಡೆದರು. ಮಲೇಷಿಯಾ, ಥಾಯ್ಲೆಂಡ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಥಮ ಸ್ಥಾನ ಪಡೆದು ಯೋಗ ಚಾಂಪಿಯನ್‌ ಎನಿಸಿಕೊಂಡರು. ತಾವು ಕಲಿತ ಶಾಲೆಯಲ್ಲಿಯೇ ದಶಕದ ಕಾಲ ಗ್ರಾಮದ ವಿದ್ಯಾರ್ಥಿಗಳಿಗೆ ಉಚಿತವಾಗಿ ಯೋಗ ಕಲಿಸಿದರು. ಈಚೆಗೆ ವಿಶ್ವ ಮಟ್ಟದ ಯೋಗ ಪತಂಜಲಿ ಪ್ರಶಸ್ತಿಯನ್ನೂ ಪಡೆದಿದ್ದಾರೆ.

- ಜೋಮನ್ ವರ್ಗೀಸ್
 

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು