ಬಾಲಪ್ಪ

ಚಿಕ್ಕಬಳ್ಳಾಪುರ | ಸಂಗೀತ

ಸಂಗೀತ ಮೋಹಿ ‘ಜಂಬೆ ಬಾಲು’

 

 

ಚಿಕ್ಕಬಳ್ಳಾಪುರ ತಾಲ್ಲೂಕಿನ ನಲ್ಲಕದಿರೇನಹಳ್ಳಿಯ ಬಾಲಪ್ಪ ಎಂಬ ಕನಸು ಕಂಗಳ ಹುಡುಗ ಚಿಕ್ಕಂದಿನಲ್ಲಿ ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ದಮ್ಮಡಿ ಮಾಡಿಕೊಂಡು ಬಡಿಯುತ್ತ ನಾದದ ಅಲೆಯಲ್ಲಿ ಕಳೆದುಹೋಗುತ್ತಿದ್ದ. ಹತ್ತನೇ ತರಗತಿಯಲ್ಲಿ ಎರಡು ಬಾರಿ ಡುಮ್ಕಿ ಹೊಡೆದಾತ ತನ್ನ ಸಂಗೀತ ಮೋಹದಿಂದಾಗಿಯೇ ಇವತ್ತು ದೇಶ–ವಿದೇಶಿಗರ ಬಾಯಲ್ಲಿ ‘ಜಂಬೆ ಬಾಲು’ ಆಗಿ ನಲಿದಾಡುತ್ತಿದ್ದಾರೆ.

 

ಬೆಂಗಳೂರಿನ ಕಲಾನಿರ್ದೇಶಕ ಜಾನ್‍ ದೇವರಾಜ್‌ ಅವರ ಪರಿಚಯದಿಂದ ಸಂಗೀತ ಲೋಕಕ್ಕೆ ಕಾಲಿಟ್ಟ ಬಾಲು, ಶಾಸ್ತ್ರೀಯವಾಗಿ ಸಂಗೀತವನ್ನು ಅಭ್ಯಾಸ ಮಾಡದಿದ್ದರೂ 2008ರಲ್ಲಿ ‘ಇಂಡಿಯನ್‌ ಫೋಕ್‌ ಬ್ಯಾಂಡ್‌’ ಮತ್ತು 2015ರಲ್ಲಿ ‘ಜಂಬೆ ಝಲಕ್’ ಎಂಬ ಸಂಗೀತ ತಂಡಗಳನ್ನು ಕಟ್ಟಿದರು. ಸದ್ಯ ಇವು ಬೆಂಗಳೂರಿನ ಜನಪ್ರಿಯ ಸಂಗೀತ ತಂಡಗಳಲ್ಲಿ ಒಂದಾಗಿವೆ. ತಮಟೆ, ದಮ್ಮಡಿ, ದುಡಿಯಂತಹ ವಿವಿಧ ಜನಪದ ವಾದ್ಯಗಳೇ ಇವರ ಬ್ಯಾಂಡ್‌ನ ಜೀವಾಳ.

 

ಬಾಲು ಅವರು ಈವರೆಗೆ ಅಮೆರಿಕ, ಚೀನಾ, ಜಪಾನ್, ಜರ್ಮನಿ, ಭೂತಾನ್ ಸೇರಿದಂತೆ ರಾಷ್ಟ್ರೀಯ, ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ತಮ್ಮ ನಾದಸುಧೆ ಹರಿಸಿದ್ದಾರೆ. 2008ರಲ್ಲಿ ಬೆಂಗಳೂರಿನಿಂದ ವಾಘಾ ಗಡಿಯವರೆಗೆ ‘ಪೀಸ್‌ ಬೈ ಸೈಕಲ್‌’ ಎಂಬ ಸಂಗೀತ ಯಾತ್ರೆಯನ್ನು ಕೈಗೊಂಡ ಇವರು ಆ ಸಮಯದಲ್ಲಿ ಸಂಗೀತ ಕಾರ್ಯಕ್ರಮದಿಂದ ಬಂದ ಹಣವನ್ನು ಸಮಾಜ ಕಲ್ಯಾಣಕ್ಕೆ ನೀಡಿದ್ದಾರೆ. ಸದ್ಯ ಬಾಲು ಶಾಲೆ ತೊರೆದವರು, ಬಾಲಕಾರ್ಮಿಕರು, ಕೊಳೆಗೇರಿಯ ಹುಡುಗರಿಗೆ ತಮ್ಮ ವಿದ್ಯೆಯನ್ನು ಧಾರೆ ಎರೆಯುವ ಕೆಲಸ ಮಾಡುತ್ತಿದ್ದಾರೆ.
 

-ಈರಪ್ಪ ಹಳಕಟ್ಟಿ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು