ಬಿ.ಆರ್‌. ಮಹೇಶ್‌

ಮಧುಗಿರಿ | ಕುಸ್ತಿ ಪಟು

ಗ್ರಾಮೀಣ ಪ್ರತಿಭೆಗೆ ಹೆಸರು ತಂದ ಕಸರತ್ತು

 

ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಸಿಕ್ಕರೆ ಸಾಮರ್ಥ್ಯದಿಂದ ಎಲ್ಲರೂ ನಿಬ್ಬೆರಗು ಆಗುವಂತೆ ಸಾಧನೆ ಮಾಡುತ್ತಾರೆ ಎಂಬುದಕ್ಕೆ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಿಗೇಶಿಯ ಬಿ.ಆರ್‌.ಮಹೇಶ್‌ ಅವರೇ ಸಾಕ್ಷಿ.

 

ಇವರು ಎಂ.ಟೆಕ್‌. ಓದಿನೊಂದಿಗೆ ದೇಶಿ ಕಸರತ್ತಿನ ಕಲೆಯಾದ ಕುಸ್ತಿಯನ್ನೂ ಮೈಗೂಡಿಸಿಕೊಂಡಿದ್ದಾರೆ.

 

ಶ್ರೀರಾಮ ಕನ್ನಡ ಸಂಘ ಆಯೋಜಿಸಿದ್ದ ಬಯಲು ಜಂಗಿ ಕುಸ್ತಿಯಲ್ಲಿ ಗೆದ್ದ ಬಳಿಕ ಇವರು ಎದುರಾಳಿಯನ್ನು ಚಿತ್‌ ಮಾಡುವ ಕಾದಾಟದ ಕಲೆಯನ್ನು ಮತ್ತಷ್ಟು ರೂಢಿಸಿಕೊಂಡರು. 2008ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿ(ಜೂನಿಯರ್) ದ್ವಿತೀಯ ಸ್ಥಾನ ಗಳಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ 2009ರಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ದ್ವೀತಿಯ ಸ್ಥಾನ ಗಳಿಸಿದ್ದರು.

 

ಮಾಗಡಿಯ ಹೆಸರಾಂತ ಕುಸ್ತಿಪಟು ಪೈಲ್ವಾನ್‌ ಶಂಕರ್‌ರಾವ್‌ ಅವರೊಂದಿಗೆ 22 ನಿಮಿಷಗಳ ಸಮಬಲದ ಕಾದಾಟ ನಡೆಸಿ ಜನಮೆಚ್ಚುಗೆ ಗಳಿದವರು ಇವರು.

 

ಕುಸ್ತಿಯೊಂದಿಗೆ ಬಾಕ್ಸಿಂಗ್‌ನಲ್ಲಿಯೂ ಇವರು ಸೈ ಎನಿಸಿಕೊಂಡಿದ್ದಾರೆ. ವಿಶ್ವವಿದ್ಯಾಲಯಗಳ ಬಾಕ್ಸಿಂಗ್‌ ಪಂದ್ಯಾವಳಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಶಿಕ್ಷಣ ಕಾಲೇಜಿನಿಂದ ಎರಡು ಬಾರಿ ಪ್ರತಿನಿಧಿಸಿದ್ದರು.

 

ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಿ ಜಯ ಗಳಿಸಿದ ಇವರಿಗೆ ಪೈಲ್ವಾನ್‌ ಪುಟ್ಟಣ್ಣ ಪ್ರಶಸ್ತಿಯೂ ಬಂದಿದೆ.

 

ಇವರ ಸಾಧನೆಯಲ್ಲಿ ತಂದೆ ಬಿ.ರಾಮಯ್ಯ ಮತ್ತು ತಾಯಿ ಗಜಲಕ್ಷ್ಮಮ್ಮ, ಕೋಚ್‌ಗಳಾದ ಸಲೋಮಾನ್‌ ವಿಕ್ಟರ್‌, ಸೈಮನ್‌ ವಿಕ್ಟರ್‌ ಬೆಂಬಲವಿದೆ.

 

- ಪೀರ್‌ಪಾಷ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು