ಪ್ರಶಾಂತ್‌ ಬಿ.

ಶಿರಾ | ಯೋಗ ಪಟು

ಯೋಗ ಒಲಂಪಿಕ್ಸ್‌ಗಾಗಿ ಭರದ ಸಿದ್ಧತೆ

 

 

ಯೋಗ ಕೇಂದ್ರ ತೆರೆದು ಬಡ– ಅನಾಥ ಮಕ್ಕಳ ಪೊರೆದು, ಅಂತರರಾಷ್ಟ್ರೀಯ ಮಟ್ಟದ ಯೋಗಪಟುಗಳಾಗಿ ಪಳಗಿಳಿಸಬೇಕು ಎನ್ನುವ ಮಹದಾಸೆ ಹೊತ್ತಿರುವ ಪ್ರಶಾಂತ್‌ ಬಿ. ಸದ್ಯ ಯೋಗ ಒಲಂಪಿಕ್ಸ್‌ಗಾಗಿ ಭರದ ಸಿದ್ಧತೆ ನಡೆಸಿದ್ದಾರೆ.

 

ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಜೋಗಯ್ಯನಹಳ್ಳಿಯವರಾದ ಪ್ರಶಾಂತ್‌, ಬೋರಯ್ಯ– ಚಿಕ್ಕದೇವಮ್ಮ ದಂಪತಿಯ 8ನೇ ಪುತ್ರ.

 

ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಯೋಗ ಪಟು ಕೋಟಾದಡಿಯಲ್ಲಿ ಉಚಿತ ಶಿಕ್ಷಣ ಪಡೆಯುತ್ತಿರುವ ಪ್ರಶಾಂತ್‌ ಅಲ್ಲಿಯೇ ತೃತೀಯ ಬಿಕಾಂನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

 

ಶಾಲೆಯಲ್ಲಿರುವಾಗಲೇ ಯೋಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಪ್ರಶಾಂತ್‌ಗೆ, ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಮತ್ತಷ್ಟು ಹುರುಪು ತುಂಬಿತ್ತು. ರಾಂಚಿಯ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿದರು.

 

ಕಳೆದ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಮಲೇಷಿಯಾದ ಕೌಲಾಲಂಪುರದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ 2 ಚಿನ್ನದ ಪದಕ ಗೆದ್ದ ಹೆಗ್ಗಳಿಕೆ ಇವರದ್ದು.

 

ಒಲಿಂಪಿಕ್ಸ್‌ನಲ್ಲಿ ಚಿನ್ನಕ್ಕೆ ಮುತ್ತಿಡುವ ಕನಸು ಹೊತ್ತಿರುವ ಪ್ರಶಾಂತ್‌, ಸಾಧನೆಗೆ ಚೈತನ್ಯ ತುಂಬುವ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ್‌ ಆಳ್ವ, ಪೋಷಕರು, ಸಹಪಾಠಿಗಳ ಸಹಕಾರವನ್ನು ವಿನಮ್ರವಾಗಿ ನೆನೆಯುತ್ತಾರೆ.

 

-ವಿಟ್ಟಲ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು