ಬಿ.ನವೀನ್‌ ಕುಮಾರ್‌

ತುಮಕೂರು | ಚಿತ್ರಕಲೆ

ವಿಶ್ವಕರ್ಮನ ಕುಂಚದ ಹಾದಿ... 

 

 

ಕುಟುಂಬದ ವಿರೋಧದ ನಡುವೆಯೂ ಕಲೆಯನ್ನೇ ಉಸಿರಾಗಿಸಿಕೊಂಡು ಬದುಕು ಕಟ್ಟಿಕೊಂಡಿರುವ ಬಿ.ನವೀನ್‌ಕುಮಾರ್‌ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಚಿತ್ರಕಲಾವಿದ.

 

ವಿಶ್ವಕರ್ಮ ಸಮುದಾಯದ ನವೀನ್‌ ಕುಮಾರ್‌ ಅವರ ಚಿತ್ತ ಹೊರಳಿದ್ದು ಚಿತ್ರಕಲೆಯತ್ತ. ಮನೆಯವರ ಒತ್ತಾಯದ ಮೇರೆಗೆ ಬಂಗಾರದ ಕುಸುರಿ ಕೆಲಸ ಕಲಿತರೂ ಚಿತ್ರಕಲೆ ಅವರನ್ನು ಇನ್ನಿಲ್ಲದಂತೆ ಕಾಡಿತು. ತನ್ನ ದೊಡ್ಡಪ್ಪ ಬಿಡಿಸುತ್ತಿದ್ದ ಚಿತ್ರಗಳಿಂದ ಚಿಕ್ಕಂದಿನಲ್ಲೇ ಪ್ರೇರಣೆ ಪಡೆದಿದ್ದ ನವೀನ್‌ ಓದಿನಲ್ಲಿ ಹಿಂದೆ, ಚಿತ್ರಕಲೆಯಲ್ಲಿ ಮುಂದೆ ಎನ್ನುವಂತಿದ್ದರು. ಸಿಕ್ಕ ಅಲ್ಪ ಸ್ವಲ್ಪ ಪ್ರೋತ್ಸಾಹವನ್ನೇ ಚಿತ್ರಕಲೆಯ ಮೆಟ್ಟಿಲಾಗಿ ಬಳಸಿಕೊಂಡರು.

 

ಮನೆಯಲ್ಲಿ ವಿರೋಧವಿದ್ದ ಕಾರಣಕ್ಕೆ ಎಷ್ಟೋ ಬಾರಿ ಸ್ನೇಹಿತರ ಮನೆಯಲ್ಲಿ ಕುಳಿತು ಚಿತ್ರ ಬರೆದಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣರಾದ ಅವರನ್ನು ಪೋಷಕರು ಒತ್ತಾಯ ಪೂರ್ವಕವಾಗಿ ಬಂಗಾರ ಕೆಲಸ ಕಲಿಯಲು ಹಚ್ಚಿದರು. 7 ವರ್ಷ ಅದೇ ಕೆಲಸದಲ್ಲಿ ಮುಂದುವರಿದ ಅವರು ಕಡೆಗೆ ಮುಖಮಾಡಿದ್ದು ಚಿತ್ರಕಲೆಯತ್ತ.
ಸಿದ್ಧಗಂಗಾ ಮಠದಲ್ಲಿ ಇದ್ದುಕೊಂಡು ಚಿತ್ರಕಲೆಯಲ್ಲಿ ಪದವಿ ಪೂರ್ಣಗೊಳಿಸಿದ ನವೀನ್‌ ಇಂದು ಕಲೆಯಲ್ಲೇ ಬದುಕು ಕಂಡುಕೊಂಡಿದ್ದಾರೆ. ಹಲವು ಪ್ರಶಸ್ತಿಗಳೂ ಅವರನ್ನು ಅರಸಿ ಬಂದಿವೆ.

 

ರಾಜ್ಯ, ಹೊರರಾಜ್ಯಗಳಲ್ಲೂ ಅವರ ಕಲೆಗಳು ಪ್ರದರ್ಶನ ಕಂಡು ಮೆಚ್ಚುಗೆ ಪಡೆದಿವೆ. ಸಮಕಾಲಿನ ಚಿತ್ರ ಕಲಾಕೃತಿ ರಚನೆ ಅವರ ಇಷ್ಟದ ವಿಷಯ. ಅವರ ಕಲೆಗಳು ಬಹುತೇಕ ‘ರಾಜಕೀಯ ವಿಡಂಬನೆ’ ಕುರಿತವುಗಳೇ ಆಗಿವೆ.

 

ಸದ್ಯ ‘ನನ್ನನ್ನು ಸಾಯಲು ಬಿಡಿ’ ಎಂಬ ವಾಕ್ಯದಡಿ ಹೊಸದೊಂದು ಕಲಾಕೃತಿ ರಚಿಸುವಲ್ಲಿ ನಿರತರಾಗಿರುವ ನವೀನ್‌ ಕುಮಾರ್‌ ‘ಕಲಾಕೃತಿ ಎಂದರೆ ದೇಶದ ಬಗ್ಗೆ ಚಿಂತನೆ ಇರಬೇಕು. ಆಗ ಕಲೆಗೆ ಗೌರವ ಕೊಟ್ಟಂಗೆ’ ಎಂಬ ವ್ಯಾಖ್ಯಾನ ನೀಡುತ್ತಾರೆ.

 

-ಸುಮಾ ಬಿ.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು