ಅವಿನಾಶ್ ಕಾಮತ್

ಉಡುಪಿ | ಸಮಾಜ ಸೇವೆ

'ಬೀಯಿಂಗ್ ಸೋಶಿಯಲ್' ಮೂಲಕ ಸಮಾಜ ಸೇವೆ

 

ರಂಗ  ಸಂಘಟಕ, ಪತ್ರಕರ್ತ, ಸಾಮಾಜಿಕ ಹೋರಾಟಗಾರ, ನಿರೂಪಕ, ಬರಹಗಾರ ಹೀಗೆ ಹಲವು ಅನ್ವರ್ಥಗಳಿಂದ ಉಡುಪಿಯ ಅವಿನಾಶ್ ಕಾಮತ್ ಅವರನ್ನು ಗುರುತಿಸಬಹುದು. ಸಾಧಕರನ್ನು ಸಮಾಜದ ಮುಖ್ಯವಾಹಿನಿಗೆ ಪರಿಚಿಸುವ ಮೂಲಕ ಇವರು ಸಮಾಜಕ್ಕೆ ಪರಿಚಿತ‌.

 

45ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿರುವ ಅವಿನಾಶ್‌ ನೇತ್ರದಾನ, ದೇಹದಾನಕ್ಕೂ ವಾಗ್ದಾನ ಮಾಡಿ ಮಾತಿಗಿಂತ ಕೃತಿಗೆ ಮಹತ್ವ ಕೊಟ್ಟಿದ್ದಾರೆ. ಕಾರ್ಯಕ್ರಮ ನಿರೂಪಕನಾಗಿ ರಾಜ್ಯ, ದೇಶ, ವಿದೇಶಗಳಲ್ಲಿ 1,000ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

 

ಪರಿಸರ ಉಳಿಸುವ ಸಂಕಲ್ಪತೊಟ್ಟು ರೇಡಿಯೋದಲ್ಲಿ 65 ಗಂಟೆಗಳ ಕಾಲ ಕಾರ್ಯಕ್ರಮ ನಡೆಸಿಕೊಟ್ಟಿರುವುದು ಇವರ ಅಗ್ಗಳಿಕೆ. ತಂಡ ಶಕ್ತಿಯ ಮಹತ್ವ ಸಾರಲು 24 ಗಂಟೆಗಳ ಕಾಲ 22 ವಿಷಯಗಳ ಕುರಿತು ನೇರ ಪ್ರಸಾರ ನಡೆಸಿದ್ದು, ದಾಖಲೆಯ ಗೌರವಕ್ಕೆ ಪಾತ್ರವಾಗಿದೆ.

 

ಸಮಾನ ಮನಸ್ಕರನ್ನು ಕಟ್ಟಿಕೊಂಡು ‘ಬೀಯಿಂಗ್ ಸೋಶಿಯಲ್’ ಸಂಘಟನೆ ಹುಟ್ಟುಹಾಕಿರುವ ಅವಿನಾಶ್‌ ಸಮಾಜದ ನೆರವಿನೊಂದಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಗಳಿಗೆ ನೆರವು ನೀಡಿದ್ದಾರೆ.

 

ಸಾಲುಮರದ ತಿಮ್ಮಕ್ಕ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದನ್ನು ಕಂಡು 2,37,000 ದೇಣಿಗೆ ಸಂಗ್ರಹಿಸಿ ಹಸ್ತಾಂತರ ಮಾಡಿದ್ದಾರೆ.  ‘ನಮ್ಮ ಮನೆ ನಮ್ಮ ಮರ’ ಯೋಜನೆಯನ್ನು ಉರಗ ತಜ್ಞ ಗುರುರಾಜ ಸನಿಲ್ ಹಾಗೂ ರಂಗತಜ್ಞ ಎಚ್.ಪಿ.ರವಿರಾಜ ಅವರೊಂದಿಗೆ ಸ್ಥಾಪಿಸಿ, 3 ವರ್ಷಗಳಲ್ಲಿ 6,000ಕ್ಕೂ ಮಿಕ್ಕಿ ಗಿಡಗಳನ್ನು ಬೆಳೆಸಿದ್ದಾರೆ ಅವಿನಾಶ್ ಕಾಮತ್.

 

ಇದಲ್ಲದೆ ಸಾಧಕರನ್ನು ಸಮಾಜಕ್ಕೆ ಪರಿಚಿಯಿಸಿ ಯುವ ಜನಾಂಗವನ್ನು ಪ್ರೇರೇಪಿಸುವ ಉದ್ದೇಶದಿಂದ ‘ಹೆಜ್ಜೆ ಗುರುತು’ ಕಾರ್ಯಕ್ರಮದಡಿ ಹಲವು ಗಣ್ಯರ ಕುರಿತು ಸಾಕ್ಷ್ಯಚಿತ್ರಗಳನ್ನು ತಯಾರಿಸಿ ಪ್ರದರ್ಶಿಸಿದ್ದಾರೆ. ‘ಕೂತು ಮಾತಾಡುವ’ ಕಾರ್ಯಕ್ರಮದ ಮೂಲಕ ಸಾಧಕರ ಜತೆಗಿನ ಸಂವಾದಕ್ಕೆ ವೇದಿಕೆ ಕಲ್ಪಿಸಿದ್ದಾರೆ.
 

- ಬಾಲಚಂದ್ರ ಎಚ್.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು