ತೇಜಸ್ವಿನಿ ದುರ್ಗದ

ಹಾನಾಪುರ | ಕ್ರಿಕೆಟ್‌ ಆಟಗಾರ್ತಿ

ಏಷ್ಯಾ ಎಮರ್ಜಿಂಗ್ ಕಪ್ ಭಾರತ ತಂಡದ ಮೀಸಲು ಆಟಗಾರ್ತಿ ತೇಜಸ್ವಿನಿ

 

ಕೆಲಸ ಅರಸಿ 19 ವರ್ಷಗಳ ಹಿಂದೆ ಗೋವಾಗೆ ಗುಳೇ ಹೋಗಿದ್ದ ಬಾದಾಮಿ ತಾಲ್ಲೂಕು ಹನಾಪುರದ ನೀಲಪ್ಪ ದುರ್ಗದ ಹಾಗೂ ನೀಲವ್ವ ದಂಪತಿ ಪುತ್ರಿ ತೇಜಸ್ವಿನಿ ಈಚೆಗೆ ಶ್ರೀಲಂಕಾದಲ್ಲಿ ನಡೆದ ಎಮರ್ಜಿಂಗ್ ಏಷ್ಯಾ ಕಪ್ ಮಹಿಳಾ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಮೀಸಲು ಆಟಗಾರ್ತಿಯಾಗಿ ಸ್ಥಾನ ಪಡೆದಿದ್ದರು.

 

ತೇಜಸ್ವಿನಿ 19 ವರ್ಷದೊಳಗಿನ ಗೋವಾ ಮಹಿಳಾ ಕ್ರಿಕೆಟ್ ತಂಡಕ್ಕೆ ನಾಯಕಿಯಾಗಿದ್ದರು. ಈಗ ಸೀನಿಯರ್ ತಂಡದಲ್ಲಿದ್ದಾರೆ. ಚಾಲೆಂಜರ್ ಟ್ರೋಫಿಯಲ್ಲಿ ಭಾರತ ‘ಬಿ’ ತಂಡದ ಸದಸ್ಯೆಯಾಗಿ ಗೋವಾ ತಂಡವನ್ನು ಪ್ರತಿನಿಧಿಸಿದ್ದರು. 

 

ಬಿ.ಎ. ಓದಿರುವ ನೀಲಪ್ಪ, 1999ರಲ್ಲಿ ಕೂಲಿಗೆಂದು ಗೋವಾಕ್ಕೆ ಹೋದರು. ಈಗ ಮಡಗಾಂವ್‌ ಪುರಸಭೆಯಲ್ಲಿ ದಿನಗೂಲಿ ಕಾರ್ಮಿಕ. ಸರ್ಕಾರಿ ಪದವಿ ಕಾಲೇಜಿನಲ್ಲಿ ತೇಜಸ್ವಿನಿ ಬಿ.ಕಾಂ ಓದುತ್ತಿದ್ದಾರೆ.

 

‘ಮಡಗಾಂವ್‌ನ ಹೋಲಿ ಸ್ಪಿರಿಟ್‌ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದ ತೇಜಸ್ವಿನಿ ಕ್ರಿಕೆಟ್‌ ಆಡಲು ನೆಹರೂ ಕ್ರೀಡಾಂಗಣಕ್ಕೆ ಹೋಗುತ್ತಿದ್ದಳು. ಅಲ್ಲಿ ಗೋವಾ ಮಹಿಳಾ ಕ್ರಿಕೆಟ್‌ ತಂಡದ ಈಗಿನ ಸಹಾಯಕ ಕೋಚ್ ಅನುರಾಧಾ ರೇಡಕರ್ ಬರುತ್ತಿದ್ದರು. ಲೆದರ್‌ಬಾಲ್‌ನಲ್ಲಿ ಸಹಜವಾಗಿ ಆಟವಾಡುತ್ತಿದ್ದ ತೇಜಸ್ವಿನಿಯನ್ನು ಗಮನಿಸಿ, ಮಗಳನ್ನು ತರಬೇತಿಗೆ ಕಳುಹಿಸಲು ಮನೆಗೆ ಬಂದು ಕೇಳಿದ್ದರು’ ಎಂದು ನೀಲಪ್ಪ ನೆನಪಿಸಿಕೊಳ್ಳುತ್ತಾರೆ.

 

‘ದಿ ಸಫೈರ್ ಕಂಫರ್ಟ್‌’ ತಾರಾ ಹೋಟೆಲ್‌ ನಿರ್ಮಾಣದಲ್ಲಿ ಕೂಲಿಯಾಗಿ ದುಡಿದಿದ್ದೆ. ಲೀಗ್‌ ಟೂರ್ನಿ ವೇಳೆ ಮಗಳು ಗೋವಾ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ ಅದೇ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುತ್ತಾಳೆ. ಅದಕ್ಕಿಂತ ಖುಷಿ ಮತ್ತೊಂದಿಲ್ಲ’ ಎನ್ನುತ್ತಾರೆ ನೀಲಪ್ಪ.

 

- ವೆಂಕಟೇಶ ಜಿ.ಎಚ್

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು