ಅಶ್ವಿನಿ ಅರಳ

ಮಂಗಳೂರು | ಕ್ರೀಡೆ

ಗ್ರಾಮೀಣ ಕ್ರೀಡಾ ಹೊಳಪು

 

‘ಟ್ರ್ಯಾಕ್‌ನಲ್ಲಿ ಎಲ್ಲರನ್ನು ಹಿಂದಿಕ್ಕಿ ಗುರಿ ತಲುಪಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಅಪ್ಪಟ ಗ್ರಾಮೀಣ ಪ್ರತಿಭೆ ಅಶ್ವಿನಿ ಅರಳ. ವಯಸ್ಸು 34, ಆದರು, ಕ್ರೀಡೆಯ ಬಗ್ಗೆ ಇದ್ದ ಅವರ ಹಸುವಿನ ಓಟ ನಿಂತಿಲ್ಲ. ಇನ್ನು ಕೂಡಾ ಫಿಟ್‌ ಆಗಿರುವ ಕ್ರೀಡಾ ಪ್ರತಿಭೆ.

 

ಬಂಟ್ವಾಳ ತಾಲ್ಲೂಕಿನ ಅರಳ ಎಂಬ ಪುಟ್ಟ ಗ್ರಾಮದಿಂದ ಕ್ರೀಡಾ ಪಯಣ ಆರಂಭಿಸಿದ ಅಶ್ವಿನಿ ಅರಳ ಹಠವಾದಿಯಂತೆ ಕಷ್ಟಪಟ್ಟು ಉತ್ತಮ ಕ್ರೀಡಾ ಟ್ರ್ಯಾಕ್‌ ರಿಕಾರ್ಡ್‌ ದಾಖಲಿಸಿ ಎಲ್ಲರ ಗಮನ ಸೆಳೆದಿದ್ದಾರೆ. 100, 200 ಮೀಟರ್‌ ಓಟದ ಸ್ಪರ್ಧೆಯಲ್ಲಿ ಮಿಂಚಿನ ಓಟದ ಮೂಲಕ ಬಂಗಾರ ಪದಕ ಮುಡಿಗೇರಿಸಿಕೊಂಡ ಗ್ರಾಮೀಣ ಕ್ರೀಡಾಪಟುವಿನ ಸಾಧನೆ ಹೊಳಪು ಎಲ್ಲರನ್ನು ಕಣ್ಣು ಕುಕ್ಕುವಂತೆ ಮಾಡಿತ್ತು.

 

ಡಿಸ್ಕಸ್‌ ಥ್ರೋ, ಹೆಪಥ್ಲಾನ್‌ ಸ್ಪರ್ಧೆಯಲ್ಲಿಯೂ ಮುಂಚೂಣಿ ಸ್ಥಾನದಲ್ಲಿರುವ ಅಶ್ವಿನಿ ಅವರ ಕ್ರೀಡಾ ಸಾಧನೆಗೆ, 5 ಬಾರಿ ಕೂಟ ದಾಖಲೆ ಮಾಡಿದ್ದು, ಬಿಲ್ಲವ ಯುವ ವಾಹಿನಿ ನೀಡುವ ವೈಯಕ್ತಿಕ ಚಾಂಪಿಯನ್‌ ಷಿಪ್‌ಗೆ ಸತತ 5 ಬಾರಿ ಆಯ್ಕೆ ಆಗಿದ್ದು ಅವರ ಕ್ರೀಡಾ ದಾಖಲೆಯ ಹೊಳಪು. ಬಿ.ಎ ಪದವೀಧರೆ ಆಗಿದ್ದು, ಹಲವು ಬಾರಿ ಕ್ರೀಡಾ ಕೋಟಾದಡಿಯಲ್ಲಿ ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸಿ ಪ್ರಯತ್ನ ಕೈಗೂಡದಿದ್ದಾಗ ಸ್ವತಂತ್ರವಾಗಿ ಉದ್ಯೋಗ ಮಾಡುತ್ತಿದ್ದಾರೆ.

 

‘ನಮ್ಮದು ಅವಿಭಕ್ತ ಕುಟುಂಬ, ಎಲ್ಲರೂ ಒಟ್ಟಾಗಿ ಇದ್ದೇವೆ. ನನ್ನ ಕ್ರೀಡಾ ಸಾಧನೆಗೆ ಪ್ರೇರೇಪಣೆ ನೀಡಿದ್ದು, ಶಿಕ್ಷಕ ನವೀನ್‌ ಆರ್‌. ಪುತ್ರನ್‌. ಅವರಿಂದ ಇವತ್ತು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದೇನೆ. ಈಚೆಗೆ ಮಂಗಳೂರಿನಲ್ಲಿ ನಡೆದ ಮಾಸ್ಟರ್ಸ್‌ ಚಾಂಪಿಯನ್‌ ಷಿಪ್‌ ಕ್ರೀಡಾಕೂಟದಲ್ಲಿ ಉತ್ತಮ ಪದಕ ದಾಖಲು ಮಾಡಿದ್ದೇನೆ. ಮನೆ, ಮಕ್ಕಳು, ಕೃಷಿ, ಎಲ್ಲದನ್ನೂ ನಿಭಾಯಿಸಿಕೊಂಡು ಸಾಗುತ್ತಿದ್ದೇನೆ’ ಎಂದು ಅಶ್ವಿನಿ ಅರಳ ಹೇಳಿದರು. 

- ಮಹೇಶ್ ಕನ್ನೇಶ್ವರ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು