ಆರ್ಯ ಕ್ರಿಶ್

ಚಿತ್ರದುರ್ಗ | ಮಾಡೆಲಿಂಗ್

ಹೋಟೆಲ್‌ ಕೆಲಸದಿಂದ ಮಾಡೆಲಿಂಗ್‌ಗೆ ಜಿಗಿದ ಆರ್ಯ ಕ್ರಿಶ್

 

 

ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡೇ ಸಿಕ್ಕ ಸಮಯದಲ್ಲಿ ಮಾಡೆಲಿಂಗ್ ಮಾಡುತ್ತಾ, ಜತೆಗೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿರುವ ರೂಪದರ್ಶಿ ಆರ್ಯ ಕ್ರಿಶ್ (ಕೃಷ್ಣ) ನಮ್ಮ ನಡುವಿನ ಅಪರೂಪದವರು.

 

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಶಂಕರನಾರಾಯಣ ಗ್ರಾಮದ ಆರ್ಯ ಕ್ರಿಶ್ 10ನೇ ವಯಸ್ಸಿನವರೆಗೆ ಅಲ್ಲಿಯೇ ಬೆಳೆದರು. ಓದಿದ್ದು ಕೇವಲ ಎಸ್‌ಎಸ್‌ಎಲ್‌ಸಿ. ಬಾಲ್ಯದಲ್ಲೇ ಟಿ.ವಿ ಷೋಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಅವರ ಮನದ ಆಸೆ ಇನ್ನಷ್ಟು ಚಿಗುರೊಡೆದು ಕೊನೆಗೆ ಮಾಡೆಲ್‌ ಕ್ಷೇತ್ರಕ್ಕೆ ಕರೆತಂದಿದೆ.

 

ತಾಯಿಯನ್ನು ಎಂಟು ವರ್ಷದ ಕೆಳಗೆ ಕಳೆದುಕೊಂಡ ಇವರ ಪಾಲಿಗೆ ತಂದೆಯೇ ಎಲ್ಲ. ತಂದೆ ಸಾಧು ಪೂಜಾರಿ. ಚಿತ್ರದುರ್ಗದ ‘ಐಶ್ವರ್ಯ ಫೋರ್ಟ್‌’ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿ ಈಗಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಗಳಿಸಲು ಹೋಟೆಲ್‌ನ ಮಾಲೀಕರ ಸಹಕಾರವೂ ಇದೆ.

 

ವಿಶೇಷ ಸಾಧನೆ: 2016ರಲ್ಲಿ ‘ಮಿಸ್ಟರ್ ಚಿತ್ರದುರ್ಗ’ ಸ್ಪರ್ಧೆಯಲ್ಲಿ ಗೆದ್ದರು. 2017ರಲ್ಲಿ ‘ಮಿಸ್ಟರ್ ಬೆಂಗಳೂರು’ ಸ್ಪರ್ಧೆಯಲ್ಲೂ ವಿಜೇತರಾದರು. ‘ಮಿಸ್ಟರ್ ಇಂಡಿಯಾ’ ಫೈನಲ್‌ನಲ್ಲಿ ಟಾಪ್‌ 5ರಲ್ಲಿ ಒಬ್ಬರೆನಿಸಿಕೊಂಡರು. ಈಚೆಗೆ ಫ್ಯಾಷನ್ ಟಿ.ವಿಗೆ ಇಂಡಿಯನ್ ಮಾಡೆಲ್ ಆಗಿ ಕಾರ್ಯನಿರ್ವಹಿಸಲು ಕರೆ ಬಂದಿದೆ.

 

‘ಸ್ಟೇಟ್‌ಮೆಂಟ್’, ‘ಥರ್ಡ್ ಕ್ಲಾಸ್ ಲವ್ ಸ್ಟೋರಿ’ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ‘ಈ ಕಾಯಕ ಯಾರಿಗಾಗಿ’ ಎಂಬ ಹೆಸರಿನ 40 ನಿಮಿಷದ ಕಿರುಚಿತ್ರದಲ್ಲಿ ನಟನಾಗಿ ಅಭಿನಯಿಸಿದ್ದಾರೆ. 

 

- ಪ್ರಣವಕುಮಾರ್‌ ಕೆ.ಎಸ್‌.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು