ಅಪೂರ್ವ ಆನಗಳ್ಳಿ

ಮಂಗಳೂರು | ರಂಗಭೂಮಿ

ರಂಗಭೂಮಿ ನಟನೆ–ನಿರ್ದೇಶನದಲ್ಲಿ ಪ್ರಖರ ಛಾಪು

 

ನಟನೆ ಹಾಗೂ ನಿರ್ದೇಶನ ಈ ಎರಡೂ ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವ ಅಪೂರ್ವ ಆನಗಳ್ಳಿ ಲಲಿತಕಲಾ ಕ್ಷೇತ್ರದ ಪ್ರಖರ ಪ್ರತಿಭೆ. ಎನ್‌ಎಸ್‌ಡಿಯ ಡ್ರಾಮ್ಯಾಟಿಕ್‌ ಆರ್ಟ್ಸ್‌ ವಿಭಾಗದಲ್ಲಿ ಮೂರು ವರ್ಷಗಳ ಡಿಪ್ಲೊಮಾ ಪೂರೈಸಿರುವ ಇವರು ರಂಗಭೂಮಿಯ ಸಕ್ರಿಯ ಕಲಾವಿದೆ.

 

‘ಚಿಕ್ಕಂದಿನಿಂದಲೂ ನನ್ನ ಮೇಲೆ ಗಾಢವಾಗಿ ಪರಿಣಾಮ ಬೀರಿದ ಮಾಧ್ಯಮವೆಂದರೆ ರಂಗಭೂಮಿ. ತೀರಾ ಸಂಕೋಚ ಸ್ವಭಾವದವಳಾದ ನಾನು ಜನರೊಂದಿಗೆ ಬೆರೆಯುತ್ತಿರಲಿಲ್ಲ. ಮೂಲತಃ ರಂಗಭೂಮಿ ಕಲಾವಿದರಾದ ತಂದೆ, ತಾಯಿ ಹಾಗೂ ನನ್ನ ದೊಡ್ಡಮ್ಮನೊಂದಿಗೆ ರಂಗ ತರಬೇತಿ ಶಿಬಿರಗಳಿಗೆ ಹೋಗುತ್ತಿದ್ದೆ. ಹೀಗೆ ನಾಲ್ಕನೇ ವಯಸ್ಸಿನಿಂದಲೇ ನನ್ನ ಮತ್ತು ರಂಗಭೂಮಿಯೊಂದಿಗಿನ ನಂಟು ಬೆಸೆದುಕೊಂಡಿತು. ಪ್ರಾರಂಭದಲ್ಲಿ ಉಡುಪಿ ಜಿಲ್ಲೆಯ ಕೋಶಿಕಾ ಮತ್ತು ಪ್ರೇಮ ಕಾರಂತರ ‘ಬೆನಕ ಮಕ್ಕಳ ನಾಟಕ ಕೇಂದ್ರ’ದ ನಾಟಕಗಳಲ್ಲಿ ಬಾಲನಟಿಯಾಗಿ ರಂಗಪಯಣ ಪ್ರಾರಂಭಿಸಿದೆ’ ಎನ್ನುತ್ತಾರೆ ಅಪೂರ್ವ.

 

ರಂಗಭೂಮಿಯಲ್ಲಿನ ಸಾಧನೆಗೆ ಪ್ರೇರಣೆ ಕುರಿತು ಅಪೂರ್ವ ಹೇಳುವುದು ಹೀಗೆ: ‘ನನ್ನ ಅಜ್ಜ ಸಂಗೀತಗಾರರು. ತಂದೆ-ತಾಯಿ ರಂಗಭೂಮಿಯವರು. ಹಾಗಾಗಿ ನಮ್ಮ ಮನೆಯ ವಾತಾವರಣವೇ ನಾಟಕ, ಸಾಹಿತ್ಯ, ಸಂಗೀತಮಯವಾಗಿತ್ತು. ಜೊತೆಗೆ ಊರಿನಲ್ಲಿ ನಡೆಯುತ್ತಿದ್ದ ಯಕ್ಷಗಾನ ಇವೆಲ್ಲವೂ ನನ್ನ ಮೇಲೆ ಬಹಳ ಪ್ರಭಾವ ಬೀರಿದ ಅಂಶಗಳು. ಹಾಗಾಗಿ ಯಾವುದೋ ಒಂದು ಘಟನೆ ಅಥವಾ ವ್ಯಕ್ತಿ ನನ್ನ ಪ್ರೇರಣೆಗೆ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಶಾಲಾ ಶಿಕ್ಷಣದ ಮೊದಲೇ ರಂಗಭೂಮಿ, ಸಂಗೀತ, ನೃತ್ಯ ಇತ್ಯಾದಿಗಳ ಶಿಕ್ಷಣ ನನಗರಿವಿಲ್ಲದೇ ಬಾಲ್ಯದಿಂದಲೇ ದೊರಕುತ್ತಾ ಹೋಯಿತು’.

 

ಸಂಗೀತ, ಭರತನಾಟ್ಯ, ಕಳರಿಪಯಟ್ಟು, ಪತ್ರಿಕೋದ್ಯಮ ಹೀಗೆ ನಾನಾ ವಿಷಯಗಳಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಇವರು ಬೆಂಗಳೂರಿನ ‘ಅನೇಕಾ’ ಮತ್ತು ಉಡುಪಿಯ ‘ಕೋಶಿಕಾ’ ತಂಡದೊಂದಿಗೆ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದಿ ಹಾಗೂ ಕನ್ನಡದಲ್ಲಿ ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ‘ಅಜ್ಜಿ ಕತೆ’, ‘ಪುಷ್ಪ ರಾಣಿ’, ‘ಅಲಿಬಾಬ ಮತ್ತು ನಲವತ್ತು ಕಳ್ಳರು’, ‘ಮೇಘದೂತ’ ಇವರು ನಟಿಸಿರುವ ಪ್ರಮುಖ ನಾಟಕಗಳು.

- ಸತೀಶ್ ಬೆಳ್ಳಕ್ಕಿ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು