ಅನುಪ್‌ ಮಯ್ಯ

ಬೆಂಗಳೂರು | ತಂತ್ರಜ್ಞಾನ

‘ಕನ್ನಡ್‌ ಗೊತ್ತಿಲ್ಲ’ದವರಿಗೆ ನೆಲದ ಭಾಷೆ ಕಲಿಸಿದ ಕಲಿ

 

‘ಉದ್ಯೋಗಕ್ಕಾಗಿ ರಾಜ್ಯಕ್ಕೆ ಬರುವ ಪರಭಾಷಿಕರು ಕನ್ನಡ ಮಾತನಾಡುತ್ತಿಲ್ಲ. ಬೆಂಗಳೂರಿನಲ್ಲೇ ಕನ್ನಡ ಕಣ್ಮರೆಯಾಗುತ್ತಿದೆ’ ಎಂದು ಕರುಬುವವರಿಗೆ ಕೊರತೆ ಇಲ್ಲ. ಆದರೆ, ಪರರಿಗೆ ನೆಲದ ಭಾಷೆ ಕಲಿಸುವವರು ಬೆರಳೆಣಿಕೆಯಷ್ಟು ಮಂದಿ. ಮನಸ್ಸು ಮಾಡಿದರೆ ಪರಭಾಷಿಕರಿಗೆ ಕನ್ನಡ ಕಲಿಸುವುದು ಬಲು ಸಲೀಸು ಎಂಬುದನ್ನು ಅನುಪ್‌ ಮಯ್ಯ ತೋರಿಸಿಕೊಟ್ಟಿದ್ದಾರೆ.

kannadgothilla.com ಆರಂಭಿಸಿರುವ ಅನೂಪ್‌  ವಾಟ್ಸ್‌ ಆ್ಯಪ್‌, ಸ್ಕೈಪ್‌ ಹಾಗೂ ತರಗತಿಗಳ ಮೂಲಕ ಕನ್ನಡ ಕಲಿಸುತ್ತಾರೆ. ಐದು ವರ್ಷಗಳಲ್ಲಿ 18,000 ಮಂದಿ ಕನ್ನಡ ಕಲಿಯುವುದಕ್ಕೆ ನೆರವಾಗಿದ್ದಾರೆ. 15 ದೇಶಗಳ ಪ್ರಜೆಗಳಿಗೆ ಕನ್ನಡ ಕಲಿಸಿದ್ದಾರೆ.

 

‘ಪುಣೆಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕಿದ್ದಾಗ ಮರಾಠಿ ಕಲಿಯುತ್ತಿದ್ದೆ. ಆ ಭಾಷೆ ಕಲಿಯುವ ಮನಸ್ಸಿದ್ದರೂ ಅದಕ್ಕೆ ಸೂಕ್ತ ಅವಕಾಶಗಳಿರಲಿಲ್ಲ. ಒಮ್ಮೆ ರೇಡಿಯೊ ಕಾರ್ಯಕ್ರಮವೊಂದರಲ್ಲಿ ಹಿಂದಿ ಹಾಡನ್ನು ಕನ್ನಡಕ್ಕೆ ಭಾವಾನುವಾದ ಮಾಡಿದ ವ್ಯಕ್ತಿಯೊಬ್ಬರು, ‘ನಾನು ಒಬ್ಬರಿಗೆ ಕನ್ನಡ ಕಲಿಸಿದೆ’ ಎಂದು ಹೇಳಿದ್ದರು. ನಾವೂ ಈ ಪ್ರಯತ್ನ ಮಾಡಬಹುದಲ್ಲ ಎಂದು ನನಗನಿಸಿತ್ತು. ಇದೇ, ‘ಕನ್ನಡ್‌ ಗೊತ್ತಿಲ್ಲ’ ಬಳಗ ರಚಿಸಲು ಪ್ರೇರಣೆಯಾಯಿತು’ ಎನ್ನುತ್ತಾರೆ ಅನುಪ್‌.

 

ಆರಂಭದ ಒಂದೂವರೆ ವರ್ಷ ಅನುಪ್‌ ಒಬ್ಬರೇ ಕನ್ನಡ ಕಲಿಸುತ್ತಿದ್ದರು. ಈಗ 11 ಮಂದಿ ಕೈಜೋಡಿಸಿದ್ದಾರೆ.  ಅವರ ತಂಡವು ಮೂರು ಹಂತಗಳಲ್ಲಿ ಭಾಷೆಯನ್ನು ಕಲಿಸುತ್ತದೆ. ಮೊದಲ ತಿಂಗಳು ವಾಕ್ಯ ರಚನೆ, ನಂತರದ ತಿಂಗಳು ವ್ಯಾಕರಣ ಹೇಳಿಕೊಡಲಾಗುತ್ತದೆ. ಮೂರನೇ ಹಂತದಲ್ಲಿ ಸಾಹಿತ್ಯದಲ್ಲಿ ಅಭಿರುಚಿ ಹುಟ್ಟಿಸುವ ಮಟ್ಟಿಗೆ ಭಾಷೆಯನ್ನು ಕಲಿಸಲಾಗುತ್ತದೆ.

 

ಕನ್ನಡದಲ್ಲಿ ಸ್ಟ್ಯಾಂಡ್‌ ಅಪ್‌ ಕಾಮಿಡಿಗೆ ಕಾರ್ಪೋರೇಟ್‌ ಸ್ಪರ್ಶ ನೀಡಿದ ಹೆಗ್ಗಳಿಕೆಯೂ ಅನುಪ್‌ ಅವರದು. ಏಳು ಸದಸ್ಯರನ್ನೊಳಗೊಂಡ ಲೋಲ್‌ಬಾಗ್ (Lolbagh) ಬಳಗ‌ ಆಸ್ಟ್ರೇಲಿಯಾ, ಜರ್ಮನಿಯಲ್ಲೂ ಪ್ರದರ್ಶನ ನೀಡಿದೆ. ಇದರ ಯೂ–ಟ್ಯೂಬ್‌ ಚಾನೆಲ್‌ಗೆ 1.14 ಲಕ್ಷ ಚಂದಾದಾರರಿದ್ದಾರೆ.

 

- ಪ್ರವೀಣ್ ಕುಮಾರ್ ಪಿ.ವಿ

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು