ಅನಘಶ್ರೀ

ಉಡುಪಿ | ಶಾಸ್ತ್ರೀಯ ನೃತ್ಯ

ಶಾಸ್ತ್ರೀಯ ನೃತ್ಯ, ಯಕ್ಷಗಾನ ಪ್ರೀತಿ; ಓದಿನಲ್ಲೂ ಮುಂದು

 

ಶಾಸ್ತ್ರೀಯ ನೃತ್ಯ, ಯಕ್ಷಗಾನ, ಕಲೆ, ಸಾಹಿತ್ಯ, ನಾಟಕ, ಹೀಗೆ ಅನಘಶ್ರೀ ಆಸಕ್ತಿಯ ಕ್ಷೇತ್ರಗಳು ಹಲವು. ದೇಶದಾದ್ಯಂತ 500ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಡಾ.ವೀರಕುಮಾರ್ ಹಾಗೂ ಡಾ.ಉಷಾಪಾರ್ವತಿ ಅವರ ಪುತ್ರಿ ಅನಘಶ್ರೀ ಮಣಿಪಾಲ್‌ನಲ್ಲಿ ಎಂಟೆಕ್‌ ವ್ಯಾಸಂಗ ಮಾಡುತ್ತಿದ್ದಾರೆ.

 

ಯಕ್ಷಗಾನ ಪ್ರೀತಿ: ಬಾಲ್ಯದಲ್ಲಿ ಅಪ್ಪ ಅಮ್ಮನ ಜತೆ ಯಕ್ಷಗಾನ ನೋಡುತ್ತಲೇ ಯಕ್ಷಲೋಕದ ಮಾಂತ್ರಿಕ ಮೋಹಕ್ಕೆ ಸಿಲುಕಿದರು. ತಂಗಿಯನ್ನು ಯಕ್ಷಗಾನ ತರಗತಿಗೆ ಕರೆದೊಯ್ಯುವಾಗ ಕಲಿಕೆಯ ಆಸಕ್ತಿ ಚಿಗುರೊಡೆದು ಯಕ್ಷಗಾನ ಕಲಾವಿದೆಯಾದರು. ಪ್ರಸ್ತುತ ಮಾರ್ಪಳ್ಳಿ ಯಕ್ಷಗಾನ ಸಂಘದಲ್ಲಿ ವಿಷ್ಣುಮೂರ್ತಿ ಉಪಾಧ್ಯಾಯರ ಶಿಷ್ಯೆಯಾಗಿ 10 ವರ್ಷಗಳಿಂದ ಯಕ್ಷಗಾನ ಕಲಿಕೆಯಲ್ಲಿ ನಿರತರಾಗಿದ್ದಾರೆ.

 

ಭರತನಾಟ್ಯ ಕಲಾವಿದೆ: ಅನಘಶ್ರೀ ಶಾಸ್ತ್ರೀಯ ನೃತ್ಯ ಪ್ರವೀಣೆಯೂ ಹೌದು. ಉಡುಪಿಯ ನೃತ್ಯನಿಕೇತನ ಕೊಡವೂರು ಸಂಸ್ಥೆಯಲ್ಲಿ 16 ವರ್ಷಗಳಿಂದ ಭರತನಾಟ್ಯ ಕಲಿಕೆಯಲ್ಲಿ ತೊಡಗಿದ್ದಾರೆ. ಗುರುಗಳಾದ ಸುಧೀರ್‌ರಾವ್ ಕೊಡವೂರು, ಮಾನಸಿ ಸುಧೀರ್‌ ಅವರ ಮಾರ್ಗದರ್ಶನದಲ್ಲಿ ನೃತ್ಯ, ಯಕ್ಷಗಾನ, ನಾಟಕಗಳನ್ನು ಒಟ್ಟಾಗಿಸಿ ಕಲಾಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ‌

 

ರಂಗಭೂಮಿ ನಂಟು: ‘ಮಾತಾಡು ಮರವೇ ಮಾತಾಡು’, ‘ಪುಷ್ಪರಾಣಿ’, ‘ಗಂಗಿ ಪ್ರಸಂಗ’, ‘ಮಹಿಳಾ ಭಾರತ’, ‘ಚಿತ್ರ’, ನೃತ್ಯಗಾಥ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಮಹಿಳಾ ಏಕವ್ಯಕ್ತಿ ಪ್ರದರ್ಶನ ‘ನೃತ್ಯಗಾಥ’ ದೇಶದ 17 ಕಡೆಗಳಲ್ಲಿ ಪ್ರದರ್ಶನ ಕಂಡಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದೆ.

 

‘ಎಳವೆಯಲ್ಲಿ ಕಲಾ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಿದ ಅಪ್ಪ–ಅಮ್ಮ ಸಾಧನೆಯ ಹಿಂದಿರುವ ಪ್ರೇರಕ ಶಕ್ತಿ’ ಎನ್ನುತ್ತಾರೆ ಅನಘಶ್ರೀ.
 

- ಬಾಲಚಂದ್ರ ಎಚ್.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು