ಅಲೋಕ್ ಆರಾಧ್ಯ

ದಾವಣಗೆರೆ | ಟೆನಿಸ್

ಒಂದೂವರೆ ದಶಕದ ಬೆವರು

 

ಹತ್ತು ವರ್ಷದ ಹುಡುಗನ ಕುಟುಂಬಕ್ಕೂ ಶರತ್ ಎಂಬ ವೈದ್ಯರಿಗೂ ಹಳೆಯ ಪರಿಚಯ. ವೈದ್ಯರಿಗೆ ಟೆನಿಸ್‌ ಇಷ್ಟ. ‘ನೀನೂ ಯಾಕೆ ಈ ಆಟ ಆಡಬಾರದು’ ಎಂದು ಹುಡುಗನ ತಲೆಯೊಳಗೆ ಮೊದಲು ಹುಳ ಬಿಟ್ಟಿದ್ದೇ ಅವರು. ಈಗ ಆ ಹುಳ ಮನಸಿನಲ್ಲಿ ಕನಸಿನ ಜೇನುಗೂಡು ಕಟ್ಟಿದೆ. ದಾವಣಗೆರೆಯ ಅಲೋಕ್ ಆರಾಧ್ಯ ಟೆನಿಸ್ ಆಟದ ಗೀಳಿಗೆ ಬಿದ್ದ ಕಥೆ ಇದು. 

 

ಈಗ ಅಲೋಕ್‌ಗೆ 24. 2005ರಿಂದ ಆಡುತ್ತಿದ್ದಾರೆ. ಮೊದಲು ಬೇಸಿಗೆ ಶಿಬಿರದಲ್ಲಿ ಶುರುವಾದ ಆಟದ ಅನುಭವ ಆಮೇಲೆ ಮೈಮನಸ್ಸನ್ನೆಲ್ಲ ಆವರಿಸಿಕೊಂಡಿದ್ದು ವಿಶೇಷ. ಶಿಬಿರದಲ್ಲಿ ಮೂಲತಂತ್ರಗಳನ್ನು ಕಲಿತ ಮೂರೇ ತಿಂಗಳ ನಂತರ ರಾಜ್ಯಮಟ್ಟದ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ಸ್‌ವರೆಗೆ ತಲುಪಿದ್ದೇ ಆಟಪ್ರೀತಿ ಗಟ್ಟಿಯಾಯಿತು. ಆಟವನ್ನು ಇನ್ನಷ್ಟು ಪ್ರೀತಿಸಿದರು. ಬೆವರ ಹನಿಗಳಿಗೆ ಲೆಕ್ಕವಿಲ್ಲ. 


ಕಳೆದ ವರ್ಷ ದಾವಣಗೆರೆಯಲ್ಲಿ ನಡೆದ ರಾಷ್ಟ್ರಮಟ್ಟದ ಟೂರ್ನಿಯ ಸಿಂಗಲ್ಸ್‌, ಡಬಲ್ಸ್‌, ಮಿಶ್ರ ಡಬಲ್ಸ್‌ ಮೂರರಲ್ಲಿಯೂ ಚಿನ್ನದ ಪದಕಗಳಿಗೆ ಕೊರಳೊಡ್ಡಿದಾಗ ಅಲೋಕ್ ಮುಖ ಮೊರದಗಲ. 

 

ಬೆಂಗಳೂರಿನ ಮಹೇಶ್ ಭೂಪತಿ ಅಕಾಡೆಮಿಯಲ್ಲಿ ಆಟವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡು ಬಂದಿರುವ ಅವರು ಇದುವರೆಗೆ ಡಬಲ್ಸ್‌ನಲ್ಲಿ 25ಕ್ಕೂ ಹೆಚ್ಚು ಹಾಗೂ ಸಿಂಗಲ್ಸ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಎರಡು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 

 

‘ಟೆನಿಸ್‌ ಆಟದ ಫಲಿತಾಂಶ ಅರ್ಧ ಮನೋಬಲವನ್ನು ಅವಲಂಬಿಸಿದರೆ, ಇನ್ನರ್ಧ ದೈಹಿಕ ಕ್ಷಮತೆಯನ್ನು ಬೇಡುತ್ತದೆ. ರೋಜರ್‌ ಫೆಡರರ್ ಸಿಂಗಲ್ಸ್‌ನಲ್ಲಿ ಆಡುವ ರೀತಿಯನ್ನು ನಾನು ಮೊದಲಿನಿಂದಲೂ ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅವರ ಪಾದಚಲನೆ, ಬ್ಯಾಕ್‌ಹ್ಯಾಂಡ್‌, ಫೋರ್‌ಹ್ಯಾಂಡ್‌ ಹೊಡೆತಗಳು ಗಮನಾರ್ಹ. ಅವೆಲ್ಲಕ್ಕಿಂತ ಮಿಗಿಲಾಗಿ ಅವರು ಸದಾ ತಣ್ಣಗೆ ಇರುತ್ತಾರೆ. ಸ್ವಲ್ಪವೂ ಆವೇಶಕ್ಕೆ ಒಳಗಾಗದೆ ಅವರಂತೆ ಆಡಿದರೆ ಎದುರಾಳಿಗೆ ನಡುಕ. ಗ್ರ್ಯಾಂಡ್‌ ಸ್ಲ್ಯಾಮ್‌ ಸಿಂಗಲ್ಸ್‌ಗಳಲ್ಲಿ ಬಹುತೇಕ ರ್‍್ಯಾಂಕಿಂಗ್ ಆಟಗಾರರು ಪಂದ್ಯ ಶುರುವಾಗುವ ಮೊದಲೇ ಅನನುಭವಿಗಳ ಎದುರು ಗೆಲುವು ಸಾಧಿಸಿರುತ್ತಾರೆ’ ಎಂದು ಅಲೋಕ್ ಅಭಿಪ್ರಾಯ ಹಂಚಿಕೊಂಡರು. 


ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ರೋಹನ್ ಬೋಪಣ್ಣ ಆಟದ ವೈಖರಿಯನ್ನು ಅವರು ಇಷ್ಟಪಟ್ಟಿದ್ದಾರೆ. 


2020 ಅವರಿಗೆ ಮಹತ್ವದ ವರ್ಷ. ವಿಜಯವಾಡ, ಚೆನ್ನೈ, ಬೆಂಗಳೂರು ಮೊದಲಾದ ಕಡೆ ಸ್ಪರ್ಧಾತ್ಮಕ ಟೆನಿಸ್‌ಗೆ ಮುಖಾಮುಖಿಯಾಗಲು ಅವರು ಸಜ್ಜಾಗಿದ್ದಾರೆ. ಮಾರ್ಚ್‌ನಲ್ಲಿ ವಿದೇಶಕ್ಕೆ ಹೋಗಿ ಇನ್ನಷ್ಟು ಸಾಣೆಗೆ ಒಳಗಾಗಬೇಕೆಂಬ ಬಯಕೆ ಇದೆ .

 

‘ಟೆನಿಸ್ ದುಬಾರಿ ಆಟ. ಬೆಂಗಳೂರಿನ ಅಕಾಡೆಮಿಯಲ್ಲಿ ಕಲಿಯಲು ತಿಂಗಳಿಗೆ 85 ಸಾವಿರದಿಂದ 90 ಸಾವಿರ ರೂಪಾಯಿ ಬೇಕು. ವಿದೇಶಗಳಿಗೆ ಹೋದರೆ ಕನಿಷ್ಠ ಮೂರೂವರೆ ಲಕ್ಷ ರೂಪಾಯಿ ಖರ್ಚಾಗುತ್ತದೆ. ನನ್ನ ಅಪ್ಪ–ಅಮ್ಮ ನನಗಾಗಿ ಬೆಂಗಳೂರಿಗೇ ಸ್ಥಳಾಂತರಗೊಂಡಿದ್ದರು. ಈಗ ಮತ್ತೆ ದಾವಣಗೆರೆಯಲ್ಲಿ ನೆಲೆಗೊಂಡಿದ್ದಾರೆ. ಅವರ ಬೆಂಬಲವೇ ನನಗೆ ಗೊಬ್ಬರ’ ಎಂದು ಅಲೋಕ್ ಕೃತಜ್ಞತಾ ಭಾವವನ್ನು ಕಣ್ಣಲ್ಲಿ ತುಳುಕಿಸಿದರು. 


ಅಪ್ಪ ಐ.ಪಿ. ಸಚಿನ್ ಉದ್ಯಮಿ. ಅಮ್ಮ ಕೋಮಲ ಮಗನ ಕನಸಿಗೆ ರೆಕ್ಕೆಪುಕ್ಕ ಹಚ್ಚಿದವರು. ಡೇವಿಸ್ ಕಪ್‌ನಲ್ಲಿ ಆಡಬೇಕೆಂಬ ಕನಸನ್ನು ಈಗ ನೇವರಿಸುತ್ತಾ ಇದ್ದಾರೆ. 

 

-ವಿಶಾಖ ಎನ್.

#ಪ್ರಜಾವಾಣಿಯುವಸಾಧಕರು2020 #PVAchievers2020

ಯುವ ಸಾಧಕರು