ಬೆಂಗಳೂರು | ಆಟೊಮೊಬೈಲ್
ವಾಹನ ಮತ್ತು ಕೈಗಾರಿಕಾ ಮಾಲಿನ್ಯ ನೆಲ, ಜಲ, ಗಾಳಿಯನ್ನು ಹಾಳು ಮಾಡಿವೆ. ಇಡೀ ಮನುಕುಲದ ಆರೋಗ್ಯವು ಮಾಲಿನ್ಯದಿಂದ ಹದಗೆಟ್ಟಿದೆ. ಭೂಮಿಯ ತಾಪಮಾನ ಏರಿಕೆಗೂ ಇದು ಪ್ರಮುಖ ಕಾರಣ. ಶುದ್ಧ ಹವೆಗಾಗಿ ವಿಶ್ವದ ಎಲ್ಲೆಡೆಯಿಂದ ಕೂಗು ಕೇಳಿ ಬಂದಿದೆ. ವಾಹನಗಳು ಹೊರಸೂಸುವ ಹೊಗೆಯಲ್ಲಿರುವ ಇಂಗಾಲಾಮ್ಲ ಮತ್ತು ಇತರ ಅಪಾಯಕಾರಿ ಲೋಹದ ಕಣಗಳನ್ನು ಶೋಧಿಸಿ ಶುದ್ಧ ಗಾಳಿಯನ್ನು ಮಾತ್ರ ಹೊರ ಬಿಡುವ ಸಾಧನವನ್ನು (Technology for soot pollution control device) ಅಭಿವೃದ್ಧಿಪಡಿಸಿದ್ದಾರೆ ಆಶಿಕ್. ಅವರ ಈ ಸಾಧನಕ್ಕೆ ಭಾರತ ಸರ್ಕಾರದಿಂದ ಪೇಟೆಂಟ್ ಕೂಡ ಲಭಿಸಿದೆ.
ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಟೊಮೊಬೈಲ್ ಎಂಜಿನಿಯರಿಂಗ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದು, ಐದನೇ ಸೆಮಿಸ್ಟರ್ ವಿದ್ಯಾರ್ಥಿ. ಆಶಿಕ್‌ಗೆ ಬಾಲ್ಯದಿಂದಲೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳ ಆಸಕ್ತಿ. ಹೊಸ ಆವಿಷ್ಕಾರದ ಬಗ್ಗೆ ಸದಾ ತುಡಿತ.
ವಾಹನ ಮತ್ತು ಕೈಗಾರಿಕಾ ಮಾಲಿನ್ಯ ಶುದ್ಧ ಮತ್ತು ಸ್ವಚ್ಛ ಪರಿಸರ ಹಾಳಾಗುವುದನ್ನು ತಡೆಯಲು ಸಾಧನ ಅಭಿವೃದ್ಧಿಪಡಿಸಬೇಕೆಂಬ ಅವರ ಛಲ ಕೈಗೂಡಿದೆ. ಮಾಲಿನ್ಯ ತಡೆ ತಂತ್ರಜ್ಞಾನ ಅಭಿವೃದ್ಧಿ ಇವರ ಸಂಶೋಧನಾ ಕ್ಷೇತ್ರ. ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಶಂಕರನಾರಾಯಣ ಸಮೀಪದ ಕುಗ್ರಾಮದಲ್ಲಿ ಜನಿಸಿದ ಇವರು, ಸದ್ಯ ಬೆಂಗಳೂರು ವಾಸಿ. ವಯಸ್ಸು 20. ಈಗಾಗಲೇ ‘ಪಂಜುರ್ಲಿ ಲ್ಯಾಬ್ಸ್’ ಎಂಬ ನವೋದ್ಯಮವನ್ನು ಸ್ಥಾಪಿಸಿದ್ದು, ಅದರ ಸಿಇಒ ಕೂಡ ಆಗಿದ್ದಾರೆ.
- ರವಿಪ್ರಕಾಶ್ ಎಸ್.