#ಪ್ರಜಾವಾಣಿಯುವಸಾಧಕರು2020 #PVAchievers2020

ಇವರು ನಮ್ಮ ಸಾಧಕರು

ತಾವು ಸಕ್ರಿಯವಾಗಿರುವ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದ 140 ಯುವ ಸಾಧಕರನ್ನು ‘ಪ್ರಜಾವಾಣಿ’ ಪರಿಚಯಿಸುತ್ತಿದೆ. ಕಲೆ, ಕೃಷಿ, ಸಮಾಜಸೇವೆ, ತಂತ್ರಜ್ಞಾನ, ಆಡಳಿತ, ಶಿಕ್ಷಣ... ಹೀಗೆ ಒಂದಲ್ಲಾ ಎರಡಲ್ಲಾ ಹತ್ತಾರು ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ ಹೆಮ್ಮೆಯ ಕನ್ನಡಿಗರಿವರು. ಹೊಸ ವರ್ಷದಲ್ಲಿ ನಮ್ಮೆಲ್ಲಾ ಓದುಗರಲ್ಲಿಯೂ ಹೊಸ ಸಾಧನೆಯ ಕನಸು ಬಿತ್ತುವ ಈ ಪ್ರಯತ್ನ ನಿಮಗೂ ಇಷ್ಟವಾಗುತ್ತದೆ ಎನ್ನುವ ಆಶಯ ನಮ್ಮದು

ಸಂಪಾದಕರ ಟಿಪ್ಪಣಿ

Ravindra Bhat

ರವೀಂದ್ರ ಭಟ್ಟ

ಕಾರ್ಯನಿರ್ವಾಹಕ ಸಂಪಾದಕ, ಪ್ರಜಾವಾಣಿ

ಬನ್ನಿ ಸಾಧಿಸೋಣ, ಸಾಧಕರಾಗೋಣ
 

ಹೊಸ ವರ್ಷದ ಆರಂಭಕ್ಕೆ ಮುನ್ನುಡಿ ಹೇಗಿರಬೇಕು ಎಂದು ಯೋಚಿಸಿದಾಗ ಹೊಳೆದ ಪದಗಳು ‘ಇನ್ನಷ್ಟು ಸಾಧಿಸೋಣ...’. ಈ ಎರಡು ಪದಗಳಲ್ಲಿಯೇ ‘ಏನಾದರೂ ಸಾಧಿಸಬೇಕು’ ಎಂಬ ಪಾಸಿಟಿವ್ ಎನರ್ಜಿ ಇದೆ. ಈಗ ನಾವು ಯಾವ ಸ್ಥಿತಿ ಮುಟ್ಟಿದ್ದೇವೆಯೋ ಅದೂ ಒಂದು ಸಾಧನೆಯೇ ಎಂಬ ಸಾಂತ್ವನವನ್ನು ‘ಇನ್ನಷ್ಟು’ ಎಂಬ ಪದ ನೀಡಿದರೆ, ‘ಸಾಧಿಸೋಣ’ ಎಂಬ ಪದವು ಸಾಧಿಸಬಲ್ಲೆವು ಎಂಬ ಆತ್ವವಿಶ್ವಾಸವನ್ನು ಧ್ವನಿಸುತ್ತದೆ.


‘ಇನ್ನಷ್ಟು ಸಾಧಿಸೋಣ’ ಎಂಬ ಪದಗಳಲ್ಲಿ ‘ಈವರೆಗೆ ಸಾಧಿಸಿದ್ದು ಸಾಲದು’ ಎಂಬ ಅತೃಪ್ತಿಯ ಧ್ವನಿಯೂ ಇದ್ದಂತೆ ಇದೆ ಅಲ್ಲವೇ? ಇಂಥ ಪಾಸಿಟಿವ್ ಅತೃಪ್ತಿಗಳು ಆಗಾಗ ನಮ್ಮನ್ನು ಕಾಡುತ್ತಿರಬೇಕು. ಆಗಲೇ ಬದುಕು ಜಡವಾಗದೆ ಹೊಸ ಚೈತನ್ಯದ ಹುಡುಕಾಟಕ್ಕೆ ಮುಂದಾದೀತು.


‘ಸಾಧನೆ ಎಂದರೇನು? ಸಾಧಕರು ಯಾರು?’ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಎಲ್ಲೆಲ್ಲೋ ಹೋಗಬೇಕಿಲ್ಲ. ಸಾಧಕರು ನಮ್ಮ ಮನೆಯಲ್ಲೇ, ನಮ್ಮ ಊರಿನಲ್ಲೇ ಇರುತ್ತಾರೆ. ಸಾಧನೆಗೆ ಕೇವಲ ಅಂಕಿಸಂಖ್ಯೆಗಳು ಅಥವಾ ಪ್ರಸಿದ್ಧಿಯಷ್ಟೇ ಮಾನದಂಡವೂ ಅಲ್ಲ. ಸಾಧಕರನ್ನು ಗುರುತಿಸಲು, ಸಾಧನೆಯನ್ನು ಮನಗಾಣಲು ತುಸು ಸೂಕ್ಷ್ಮ ಮನಸ್ಸು ಬೇಕಷ್ಟೇ?


ನಮ್ಮಲ್ಲಿ ಹಲವರಿಗೆ ಹೊಸ ವರ್ಷದ ನಿರ್ಣಯ ಬರೆದುಕೊಳ್ಳುವ ರೂಢಿಯಿದೆ. ಈ ರೂಢಿಯೂ ನಾವು ಬದಲಾಗುತ್ತೇವೆ, ಬದಲಾಗಬೇಕು ಎಂಬ ಅದಮ್ಯ ಆಸೆಯೊಂದಿಗೇ ಆರಂಭವಾಗುತ್ತದೆ. ಈ ವರ್ಷದ ಜನವರಿ 1ನೇ ತಾರೀಖು ನಮ್ಮೆಲ್ಲರಲ್ಲಿಯೂ ಇನ್ನಷ್ಟು ಸಾಧಿಸಬೇಕು, ಮತ್ತಷ್ಟು ಬೆಳೆಯಬೇಕು ಎನ್ನುವ ತಹತಹ ಹುಟ್ಟುಹಾಕಲಿ. ಅದು ನಮ್ಮ ಹೊಸ ವರ್ಷದ ನಿರ್ಣಯಗಳ ಭಾಗವೂ ಆಗಿರಲಿ.


‘ಇನ್ನಷ್ಟು ಸಾಧಿಸೋಣ’ ಎನ್ನುವ ಕನಸಿಗೆ ಮಾದರಿಗಳನ್ನು ಹುಡುಕುವಾಗ ನಮ್ಮ ಸುತ್ತಮುತ್ತಲು ಇರುವ ಹಲವರ ವಿಶಿಷ್ಟ ಬದುಕು ಗಮನ ಸೆಳೆಯಿತು. ಚಿಕ್ಕವಯಸ್ಸಿನಲ್ಲಿ ಗಮನಾರ್ಹ ಸಾಧನೆ ಮಾಡಿದವರ ಜೀವನವೇ ನಮ್ಮೆಲ್ಲರಿಗೂ ಇನ್ನಷ್ಟು, ಮತ್ತಷ್ಟು, ಮಗದಷ್ಟು ಸಾಧಿಸಲು ಪ್ರೇರಣೆ ಒದಗಿಸುವ ಜೀವಚೈತನ್ಯವೂ ಆಗಬಲ್ಲದು.


ಬದಲಾವಣೆ ಮತ್ತು ಹೊಸತನಗಳನ್ನು ಸದಾ ತೆರೆದ ಮನದಿಂದ ಸ್ವಾಗತಿಸುವ ’ಪ್ರಜಾವಾಣಿ‘ಯು 21ನೇ ಶತಮಾನದ 2ನೇ ದಶಕದ ಕೊನೆಯ ವರ್ಷದ ಮೊದಲ ದಿನ ನಮ್ಮ ನಡುವಿನ 140 ಸಾಧಕರನ್ನು ನಿಮಗೆ ಪರಿಚಯಿಸುತ್ತಿದೆ. ಇವರೆಲ್ಲರೂ ನಮ್ಮೂರು, ನಮ್ಮ ಜಿಲ್ಲೆ, ನಮ್ಮ ರಾಜ್ಯದವರೇ ಆಗಿದ್ದಾರೆ. ನಮ್ಮೆಲ್ಲರ ಮನದಲ್ಲಿ ಬೆಚ್ಚಗಿರುವ ‘ಸಾಧಿಸಬೇಕು’ ಎನ್ನುವ ಆಕಾಂಕ್ಷೆಗೆ ಈ ಸಾಧಕರ ಬದುಕು ಪ್ರೇರಣೆಯಾಗಲಿ ಎಂದು ಆಶಿಸುತ್ತೇನೆ.

ಪ್ರತಿಕ್ರಿಯಿಸಿ